ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ; 10 ಜನರಿಗೆ ಗಾಯ

ಬೆಳ್ತಂಗಡಿ, .ಮಾ.1: ಇಲ್ಲಿಗೆ ಸಮೀಪ ನಡ ಗ್ರಾಮದ ಕುದ್ಕುಲ ಎಂಬಲ್ಲಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಬುಧವಾರ ಸಂಜೆ 7:20ರ ಸುಮಾರಿಗೆ ಸಂಭವಿಸಿದೆ.
ಬೆಳ್ತಂಗಡಿಯಿಂದ ಕೊಲ್ಲಿಗೆ ಹೋಗುವ ವರುಣ್ ಟ್ರಾವೆಲ್ಸಿಗೆ ಸೇರಿದ ಕೆ.ಎ 19 ಎಡಿ.5441 ನಂಬರಿನ ಬಸ್ ಪಲ್ಟಿಯಾಗಿದ್ದು, ಬಸ್‌ನ ನಿರ್ವಾಹಕ ಸಹುಲ್ ಎಂಬಾತನಿಗೆ ಗಂಭೀರವಾದ ಗಾಯಗಳಾಗಿದೆ.
ಚಾಲಕ ಭಾಸ್ಕರ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕೃಷ್ಣ, ಸುಂದರಿ ಎಂಬವರಿಗೂ ಗಂಭೀರ ಗಾಯಗಳಾಗಿದ್ದು ಇವರೆಲ್ಲರನ್ನೂ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇತರೆ ಪ್ರಯಾಣಿಕರಾದ ಕುರಿಯಾಕೋಸ್(40), ಅಬ್ದುಲ್‌ರಹಿಮಾನ್(45), ಗಣೇಶ(35), ಪ್ರಶಾಂತ(26), ಆನಂದ ಹಾಗೂ ಲಿಂಗಪ್ಪ ಎಂಬವರಿಗೂ ಗಾಯಗಳಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಸ್‌ನಲ್ಲಿ ಸುಮಾರು 20 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದ್ದು ಉಳಿದವರಿಗೆ ಯಾವುದೇ ಹೆಚ್ಚಿನ ಗಾಯಗಳಾಗಿಲ್ಲ.
ರಸ್ತೆಯ ನಡುವೆಯೇ ಬಸ್ ಮಗುಚಿ ಬಿದ್ದಿದ್ದು ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ ಘಟನೆಯ ಬಗ್ಗೆ ಮಾಹಿತಿ ಪಡೆದು ಬೆಳ್ತಂಗಡಿ ಪೋಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







