ಭಾರತದ 104 ಉಪಗ್ರಹಗಳ ಉಡ್ಡಯನದಿಂದ ಆಘಾತ
ಅಮೆರಿಕದ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಅಭ್ಯರ್ಥಿ
.jpg)
ವಾಶಿಂಗ್ಟನ್, ಮಾ. 1: ಕಳೆದ ತಿಂಗಳು ಭಾರತ ಒಂದೇ ಉಡಾವಣೆಯಲ್ಲಿ 100ಕ್ಕೂ ಅಧಿಕ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಸೇರಿಸಿದ ಸುದ್ದಿಯನ್ನು ಓದಿ ‘ಆಘಾತ’ವಾಯಿತು ಎಂದು ಅಮೆರಿಕದ ಉನ್ನತ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಹುದ್ದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಂದ ಆಯ್ಕೆಯಾಗಿರುವ ಅಭ್ಯರ್ಥಿ ಹೇಳಿದ್ದಾರೆ.
‘‘ಈ ಉಪಗ್ರಹಗಳು ಗಾತ್ರದಲ್ಲಿ ಸಣ್ಣದಾಗಿರಬಹುದು ಹಾಗೂ ಬೇರೆ ಬೇರೆ ಕಾರ್ಯಗಳನ್ನು ಹೊಂದಿರಬಹುದು. ಆದರೆ, ಒಂದೇ ರಾಕೆಟ್ ಮೂಲಕ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದು ಎಂಬುದನ್ನು ಭಾರತ ತೋರಿಸಿದೆ’’ ಎಂದು ಮಾಜಿ ಸೆನೆಟರ್ ಡಾನ್ ಕೋಟ್ಸ್ ಮಂಗಳವಾರ ಹೇಳಿದರು.
ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ನಿರ್ದೇಶಕ ಹುದ್ದೆಯನ್ನು ಖಚಿತಪಡಿಸುವ ಸಂಸದರ ಸಂದರ್ಶನದ ವೇಳೆ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ವಿಷಯದಲ್ಲಿ ಅಮೆರಿಕ ಹಿಂದುಳಿಯಲು ಸಾಧ್ಯವಿಲ್ಲ ಎಂದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಫೆಬ್ರವರಿ 15ರಂದು ಆಂಧ್ರಪ್ರದೇಶದ ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳನ್ನು ಉಡಾಯಿಸಿ ದಾಖಲೆ ನಿರ್ಮಿಸಿರುವುದನ್ನು ಸ್ಮರಿಸಬಹುದಾಗಿದೆ.







