ಹಾರ್ವರ್ಡ್‌ಗಿಂತ ಹಾರ್ಡ್‌ವರ್ಕ್ ಹೆಚ್ಚು ಪ್ರಭಾವಿ: ಮೋದಿ
ನೋಟು ಅಮಾನ್ಯಿಕರಣದ ಟೀಕಾಕಾರರಿಗೆ ಪ್ರಧಾನಿ ತಿರುಗೇಟು

ಉತ್ತರಪ್ರದೇಶ, ಮಾ.2: ಹಾರ್ವರ್ಡ್(ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯ) ಗಿಂತ ಹಾರ್ಡ್‌ವರ್ಕ್ (ಕಠಿಣ ಪರಿಶ್ರಮ) ಹೆಚ್ಚು ಪ್ರಭಾವಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ಸರಕಾರ ಅಧಿಕ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಕಾರಣ ದೇಶದ ಜಿಡಿಪಿ ದರ ಕುಸಿಯಲಿದೆ. ನೋಟು ಅಮಾನ್ಯೀಕರಣವು ವಿಶ್ವಾಸವೆಂಬ ಆಧಾರಸ್ಥಂಬ ಹೊಂದಿರುವ ಅರ್ಥವ್ಯವಸ್ಥೆಯ ಮೇಲೆ ನಡೆಸಲಾಗಿರುವ ಸರ್ವಾಧಿಕಾರಿ ಧೋರಣೆಯ ಕ್ರಮವಾಗಿದೆ ಎಂಬ ನೋಬೆಲ್ ಪುರಸ್ಕೃತ ಆರ್ಥಿಕತಜ್ಞ, ಹಾರ್ವರ್ಡ್ ವಿವಿಯ ಪ್ರೊಫೆಸರ್ ಅಮರ್ತ್ಯ ಸೇನ್ ಅವರ ಟೀಕೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಪ್ರಧಾನಿ ಮೋದಿ ಈ ರೀತಿ ತಿರುಗೇಟು ನೀಡಿದ್ದಾರೆ.
ನೋಟು ಅಮಾನ್ಯೀಕರಣ ನಿರ್ಧಾರದಿಂದ ಅಭಿವೃದ್ಧಿ ದರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗಿಲ್ಲ. ಇತ್ತೀಚಿನ ಜಿಡಿಪಿ ಅಂಕಿಅಂಶದ ಪ್ರಕಾರ ಜಿಡಿಪಿ (ನಿವ್ವಳ ದೇಶೀಯ ಉತ್ಪನ್ನ) ಬೆಳವಣಿಗೆಯ ಹಾದಿಯಲ್ಲಿದೆ. ದೇಶದ ಅರ್ಥವ್ಯವಸ್ಥೆಯು ಶೇ.7 ಜಿಡಿಪಿ ಬೆಳವಣಿಗೆ ದಾಖಲಿಸಿದೆ. ವಾಸ್ತವವಾಗಿ, ಕಠಿಣ ಪರಿಶ್ರಮ ಹಾರ್ವರ್ಡ್‌ಗಿಂತಲೂ ಪ್ರಭಾವಶಾಲಿ ಎಂಬುದು ಸಾಬೀತಾಗಿದೆ ಎಂದು ಇಲ್ಲಿ ನಡೆದ ಚುನಾವಣಾ ಸಭೆಯೊಂದರಲ್ಲಿ ಮೋದಿ ಹೇಳಿದರು.
ಹಣದ ಬಿಕ್ಕಟ್ಟಿನ ಹೊರತಾಗಿಯೂ 2016-17ರ ಸಾಲಿನಲ್ಲಿ ಜಿಡಿಪಿ ಬೆಳವಣಿಗೆಯ ದರ ಶೇ.7.1ರಷ್ಟು ಇರಲಿದ್ದು ಇದು ಚೀನಾದ ಜಿಡಿಪಿ ದರ(ಶೇ.6.8)ಕ್ಕಿಂತ ಅಧಿಕವಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ವಿಶ್ವದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆ ಹೊಂದಿದ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಲಿದೆ.
ಉತ್ತರಪ್ರದೇಶದ ಆರಂಭಿಕ ಐದು ಹಂತದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿಯ ಗೆಲುವನ್ನು ಮತದಾರರು ಖಾತರಿಗೊಳಿಸಿದ್ದಾರೆ. ಮುಂದಿನ ಎರಡು ಹಂತದಲ್ಲಿ ಇನ್ನಷ್ಟು ಕೊಡುಗೆ ಹಾಗೂ ಬೋನಸ್ ಸೀಟುಗಳನ್ನು ಬಿಜೆಪಿಗೆ ನೀಡಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ತರಕಾರಿ ಕೊಳ್ಳುವಾಗ ವ್ಯಾಪಾರಿಗಳು ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪನ್ನು ತರಕಾರಿ ಜೊತೆ ಬೋನಸ್ ಆಗಿ ನೀಡುವಂತೆ ಮತದಾರರು ಇನ್ನಷ್ಟು ಸೀಟುಗಳನ್ನು ಪಕ್ಷಕ್ಕೆ ಬೋನಸ್ ಆಗಿ ನೀಡಲಿದ್ದಾರೆ ಎಂದರು.







