ರಾಜ್ಯದಲ್ಲಿರುವ ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ಕ್ರೈಸ್ತ ಅಭಿವೃದ್ಧಿ ಮಂಡಳಿಯಾಗಿ ಪುನಾರಚನೆಗೆ ಡಿಸೋಜ ಪ್ರಸ್ತಾಪ

ಮಂಗಳೂರು.ಮಾ,1:ರಾಜ್ಯದಲ್ಲಿರುವ ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ಕ್ರೈಸ್ತ ಅಭಿವೃದ್ಧಿ ಮಂಡಳಿಯಾಗಿ ಪುನಾರಚನೆ ಮಾಡಬೇಕು ಮತ್ತು ಈ ಮಂಡಳಿಗೆ ಕ್ರೈಸ್ತ ಜನಸಂಖ್ಯೆಯ ಆಧಾರದಲ್ಲಿ 300 ಕೋಟಿ ಅನುದಾನವನ್ನು ಮೀಸಲಿರಿಸಲು ರಾಜ್ಯದ ಮುಖ್ಯ ಮಂತ್ರಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಸರಕಾರದ ಮುಖ್ಯ ಸಚೇತಕ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಕ್ರೈಸ್ತ ಅಭಿವೃದ್ಧಿ ಪರಿಷತ್ತಿಗೆ 2016-17ನೆ ಸಾಲಿನ ಆಯವ್ಯಯದಲ್ಲಿ 125 ಕೋಟಿ ರೂ ಅನುದಾನ ನೀಡಿರುತ್ತಾರೆ. ಆದರೆ ಕ್ರೈಸ್ತ ಅಭಿವೃದ್ಧಿ ಸಮಿತಿಗೆ ನೀಡಿದ ಎಲ್ಲಾ ಅನುದಾನವನ್ನು ಸ್ವತಂತ್ರವಾಗಿ ಯೋಜನೆಗಳನ್ನು ರಚನೆ ಮಾಡಿ ಅನುದಾನವನ್ನು ಬಳಸುವಂತಿಲ್ಲಾ ಬದಲಾಗಿ ಮೇಲೆ ನೀಡಿದ ಅನುದಾನವನ್ನು ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ವಿವಿಧ ಯೋಜನೆಗಳಿಗೆ ನೀಡಲಾಗುತ್ತಿದೆ.
ಆದರೆ ಈ ಅನುದಾನ ಸರಿಯಾಗಿ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ಕೈಸ್ತ ಅಭಿವೃದ್ಧಿ ಪರಿಷತ್ತನ್ನು ಕ್ರೈಸ್ತ ಅಭಿವೃದ್ಧಿ ಮಂಡಳಿಯನ್ನಾಗಿ ಮಾರ್ಪಡಿಸಬೇಕು. ಆಂಧ್ರ ಪ್ರದೇಶ ರಾಜ್ಯ ಸರಕಾರ ಸ್ಥಾಪಿಸಿರುವಂತೆ ಕ್ರೈಸ್ತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕಾಗಿದೆ. ಆಂಧ್ರದಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆ ಶೇ 1.8ರಷ್ಟಿದೆ. ಕರ್ನಾಟಕದಲ್ಲಿ 30ಲಕ್ಷ ಕ್ರೈಸ್ತರಿದ್ದು ರಾಜ್ಯದ ಜನಸಂಖ್ಯೆಯ ಶೇ 5ರಷ್ಟಿದ್ದಾರೆ. ರಾಜ್ಯದ ಕ್ರೈಸ್ತರ ಪ್ರತಿಭಾನಿತ್ವದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು,ಉದ್ಯೋಗ ಮಾರ್ಗದರ್ಶನ ನೀಡಲು,4ಪ್ರಾದೇಶಿಕ ವಿಭಾಗಗಳನ್ನು ಆರಂಭಿಸಬೇಕಾಗಿದೆ. ಕ್ರೈಸ್ತರ ಪವಿತ್ರ ಸ್ಥಳವಾದ ಜೆರುಸಲೇಮ್ ಯಾತ್ರೆ ಕೈ ಗೊಳ್ಳಲು ಆಂಧ್ರ ಮಾದರಿಯಲ್ಲಿ ರಾಜ್ಯದ ಕ್ರೈಸ್ತರಿಗೂ ಅನುದಾನ ಬಿಡುಗಡೆ ಮಾಡಬೇಕು.
ಕೈಸ್ತ ವಿದ್ಯಾರ್ಥಿಗಳಿಗೆ ವಿಭಾಗೀಯ ಮಟ್ಟದಲ್ಲಿ ವಸತಿನಿಲಯಗಳನ್ನು ಆರಂಭಿಸಬೇಕು. ರಾಜ್ಯದ ಕ್ರೈಸ್ತ ಸಮುದಾಯದ ಕಲೆ,ಸಂಸ್ಕೃತಿ,ಸಾಹಿತ್ಯ ಭಾಷೆಯನ್ನು ಪೋತ್ಸಾಹಿಸಲು ಕ್ರೈಸ್ತ ಭವನಗಳನ್ನು ಸರ್ಕಾರ ನಿರ್ಮಾಣ ಮಾಡಲು ಅನುದಾನ ಮೀಸಲಿಡಬೇಕು. ಕ್ರೈಸ್ತ ಸಮುದಾಯದವರು ವಾಸವಾಗಿರುವ ಕಾಲೋನಿಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನವನ್ನು ಮೀಸಲಿಡಲು ಮುಖ್ಯ ಮಂತ್ರಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗುವುದು ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕ್ರೈಸ್ತ ಅಭಿವೃದ್ಧಿ ಪರಿಷತ್‌ನ ಪ್ರತಿನಿಧಿ ಸೆಬಾಸ್ಟಿನ್ ಕೆ.ವಿ,ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯ ಮಾರ್ಸೆಲ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.







