ಅಸ್ಸಾಂನ ವ್ಯಕ್ತಿಯಿಂದ ಫೇಸ್‌ಬುಕ್ ಅಭಿಯಾನ...
ನನ್ನ ತಂದೆಯ ಹಂತಕರು ಈಗ ಜಿಲ್ಲೆಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ..

ಹೊಸದಿಲ್ಲಿ, ಮಾ.1: ಈ ಹಿಂದೆ ತನ್ನ ತಂದೆಯನ್ನು ಕೊಂದಿದ್ದ ವ್ಯಕ್ತಿಗಳೇ ಈಗ ಜಿಲ್ಲೆಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ . ನಮಗೆ ನಿರಂತರ ಜೀವಬೆದರಿಕೆ ಒಡ್ಡುತ್ತಿದ್ದಾರೆ ಎಂದು ಅಸ್ಸಾಂ ರಾಜ್ಯದ ಹಫ್ಲಾಂಗ್ ಗಿರಿಧಾಮದ ಡೇನಿಯಲ್ ಲಂಗ್ತಾಸಾ ಎಂಬಾತ ಫೇಸ್‌ಬುಕ್‌ನಲ್ಲಿ ಹಾಕಿರುವ ಬರಹವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಸಾವಿರಾರು ಮಂದಿ ಇದನ್ನು 'ಲೈಕ್' ಮಾಡಿದ್ದಾರೆ.
ಲಂಗ್ತಾಸಾ ಹೇಳುವ ಪ್ರಕಾರ, ಈ ಹಿಂದೆ ದೇಶದ ವಿರುದ್ಧ ಹೋರಾಟ ನಡೆಸುತ್ತಿದ್ದ ಈಶಾನ್ಯ ರಾಜ್ಯಗಳ ಕೆಲವು ಉಗ್ರಗಾಮಿ ಸಂಘಟನೆಯ ಸದಸ್ಯರು ಲಂಗ್ತಾಸನ ತಂದೆಯನ್ನು ಕೊಂದು ಹಾಕಿದ್ದರು.
ಬಳಿಕ ಭಾರತ ಸರಕಾರಕ್ಕೆ ಶರಣಾದ ಈ ಉಗ್ರಗಾಮಿಗಳು ಕೋಟ್ಯಾಂತರ ರೂಪಾಯಿ ಹಣವನ್ನು ಪರಿಹಾರ ರೂಪದಲ್ಲಿ ಪಡೆದಿದ್ದಾರೆ. ನಂತರ ಇವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಜಿಲ್ಲೆಯಲ್ಲಿ ಈಗ ಇವರದೇ ಅಧಿಕಾರ ನಡೆಯುತ್ತಿದೆ ಎಂದು ಈತ ಅಳಲು ತೋಡಿಕೊಂಡಿದ್ದಾನೆ.
ಆಡಳಿತದ ವಿರುದ್ಧ ನಿಲುವು ತಳೆದರೆ ದಬಾಯಿಸುವ, ಜೀವಬೆದರಿಕೆ ಒಡ್ಡುವ ಪ್ರಕ್ರಿಯೆ ನಡೆಯುತ್ತಿದೆ . ತಾನು ಮತ್ತು ಕುಟುಂಬ ವರ್ಗದರು ಜೀವಭಯದಿಂದ ದಿನ ಕಳೆಯುತ್ತಿದ್ದೇವೆ ಎಂದು ಈತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ಹಲವು ಮಂದಿ ಈತನಿಗೆ ನೆರವಿನ ಹಸ್ತ ಚಾಚಿದ್ದಾರೆ. ನಿನ್ನ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.