ಬ್ರಹ್ಮಾವರ: ಕುಡಿಯಲು ಹಣ ನೀಡಲಿಲ್ಲವೆಂದು ಸ್ನೇಹಿತನನ್ನೇ ಚೂರಿಯಿಂದ ಇರಿದು ಕೊಂದ!

ಬ್ರಹ್ಮಾವರ, ಮಾ.1: ಕುಡಿಯಲು ಹಣ ನೀಡದಕ್ಕಾಗಿ ಸ್ನೇಹಿತನನ್ನೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಪೇತ್ರಿಯ ಚೇರ್ಕಾಡಿ ಯುವಕ ಮಂಡಲದ ಆಶ್ವತ್ಧಕಟ್ಟೆಯ ಹತ್ತಿರ ಇಂದು ಬೆಳಗ್ಗೆ 9:30ರ ಸುಮಾರಿಗೆ ನಡೆದಿದೆ.
ಕೊಲೆಯಾದವರನ್ನು ಚೇರ್ಕಾಡಿ ಗ್ರಾಮದ ಕನ್ನಾರು ನಿವಾಸಿ ಪ್ರಕಾಶ ನಾಯ್ಕ(38) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಪ್ರಶಾಂತ ಕುಲಾಲ್ ಯಾನೆ ಪಚ್ಚು ಯಾನೆ ಮಣಿ(32) ಎಂಬಾತನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿ ರಾತ್ರಿ ನ್ಯಾಯಾಧೀಶರ ಮನೆ ಮುಂದೆ ಹಾಜರು ಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಹೊಟೇಲ್ ಕೆಲಸ ಮಾಡುತ್ತಿದ್ದ ಪ್ರಕಾಶ್ ನಾಯ್ಕ ನಿನ್ನೆ ಯಷ್ಟೆ ಊರಿಗೆ ಬಂದಿದ್ದರು. ಪ್ರಕಾಶ್ ಹಾಗೂ ಪ್ರಶಾಂತ್ ಸ್ನೇಹಿತರಾಗಿದ್ದು, ಪ್ರಶಾಂತ್ ಕುಡಿಯುವುದಕ್ಕಾಗಿ ಪ್ರಕಾಶ್ ನಾಯ್ಕನಲ್ಲಿ ಯಾವತ್ತೂ ಹಣ ಕೇಳುತ್ತಿದ್ದನು. ಪ್ರಕಾಶ್ ಕೂಡ ಅವನಿಗೆ ಹಣ ನೀಡುತ್ತಿದ್ದನು.
ಹೀಗೆ ಊರಿಗೆ ಬಂದ ಪ್ರಕಾಶ್‌ನಲ್ಲಿ ಇಂದು ಬೆಳಗ್ಗೆ ಪ್ರಶಾಂತ್ ಹಣ ಕೇಳಿದ್ದನು. ಇದೇ ವಿಚಾರದಲ್ಲಿ ಅವರೊಳಗೆ ತಕರಾರು ಉಂಟಾಗಿ ಮಾತಿಗೆ ಮಾತು ಬೆಳೆದು ಪ್ರಶಾಂತ್, ಪ್ರಕಾಶ್‌ಗೆ ಬೆದರಿಕೆ ಹಾಕಿದನು. ಅವರೊಳಗೆ ಮತ್ತೆ ಮಾತುಕತೆ ನಡೆದು ಪ್ರಶಾಂತನು ತನ್ನ ಪ್ಯಾಂಟ್ ಕಿಸೆಯಲ್ಲಿದ್ದ ಚೂರಿ ಯನ್ನು ತೆಗೆದು ಪ್ರಕಾಶರ ಹೊಟ್ಟೆಗೆ ಎರಡು ಬಾರಿ ಬಲವಾಗಿ ಇರಿದನು.
ಇದರಿಂದ ತೀವ್ರ ರಕ್ತ ಸ್ರಾವಗೊಂಡ ಪ್ರಕಾಶ್‌ನನ್ನು ಅಲ್ಲೇ ಇದ್ದ ರಮೇಶ, ಹರೀಶ ಶೆಟ್ಟಿ ಎಂಬವರು ಉಪಚರಿಸಿ, ಬಳಿಕ ಪ್ರಕಾಶ್ ಪತ್ನಿ ಸುಜಾತ ಹಾಗೂ ಅವರ ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ತೀವ್ರ ವಾಗಿ ಗಾಯಗೊಂಡಿದ್ದ ಪ್ರಕಾಶ್ ದಾರಿ ಮಧ್ಯೆ ಮೃತಪಟ್ಟರು.
ಪ್ರಶಾಂತ್ ಕುಲಾಲ್ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಂಧನಕ್ಕೆ ಸಿಗದೆ ತಲೆಮರೆಸಿಕೊಂಡಿದ್ದನು. ಅಲ್ಲದೆ ಈತನ ವಿರುದ್ಧ ಇತರ ಪೊಲೀಸ್ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿರುವ ಬಗ್ಗೆ ತಿಳಿದುಬಂದಿದೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಬಾಲಕೃಷ್ಣ, ಉಡುಪಿ ಡಿವೆಎಸ್ಪಿ ಕುಮಾರಸ್ವಾಮಿ, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







