ಇಟಲಿಯನ್ ಓಪನ್: ಶರಪೋವಾಗೆ ವೈಲ್ಡ್ ಕಾರ್ಡ್

ರೋಮ್, ಮಾ.1: ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾಗೆ ಮೇನಲ್ಲಿ ನಡೆಯಲಿರುವ ಇಟಲಿಯನ್ ಓಪನ್‌ನಲ್ಲಿ ಆಡಲು ವೈಲ್ಡ್ ಕಾರ್ಡ್ ನೀಡಲಾಗುವುದು ಎಂದು ಟೂರ್ನಿಯ ಆಯೋಜಕರು ಬುಧವಾರ ದೃಢಪಡಿಸಿದ್ದಾರೆ.
ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ 15 ತಿಂಗಳ ನಿಷೇಧದ ಶಿಕ್ಷೆಯನ್ನು ಅನುಭವಿಸಿರುವ ವಿಶ್ವದ ಮಾಜಿ ನಂ.1 ಆಟಗಾರ್ತಿ ಶರಪೋವಾ ಎಪ್ರಿಲ್‌ನಲ್ಲಿ ಸ್ಟಟ್‌ಗರ್ಟ್ ಓಪನ್ ಟೂರ್ನಿಯಲ್ಲಿ ಆಡುವ ಮೂಲಕ ಸಕ್ರಿಯ ಟೆನಿಸ್‌ಗೆ ವಾಪಸಾಗಲಿದ್ದಾರೆ.
2016ರ ಆಸ್ಟ್ರೇಲಿಯನ್ ಓಪನ್‌ನ ವೇಳೆ ಮೆಲ್ಡೋನಿಯಂ ಸೇವನೆಯಿಂದ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಶರಪೋವಾ ಆ ಬಳಿಕ ಯಾವುದೇ ಸ್ಪರ್ಧಾತ್ಮಕ ಟೆನಿಸ್‌ನಲ್ಲಿ ಆಡಿಲ್ಲ. ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ ಎರಡು ವರ್ಷ ಕಾಲ ನಿಷೇಧ ಹೇರಿತ್ತು. ಶರಪೋವಾ ನಿಷೇಧದ ವಿರುದ್ದ ಜಾಗತಿಕ ಕ್ರೀಡಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಶರಪೋವಾ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಶಿಕ್ಷೆಯ ಅವಧಿಯನ್ನು 15 ತಿಂಗಳಿಗೆ ಕಡಿತಗೊಳಿಸಿತ್ತು.
ಇಟಲಿಯನ್ ಟೂರ್ನಿ ಮೇ 15ರಿಂದ 21ರ ತನಕ ನಡೆಯಲಿದೆ. ಶರಪೋವಾಗೆ ಮೇ 6 ರಿಂದ 13ರ ತನಕ ನಡೆಯಲಿರುವ ಮ್ಯಾಡ್ರಿಡ್ ಓಪನ್‌ಗೂ ವೈಲ್ಡ್‌ಕಾರ್ಡ್ ಪ್ರವೇಶ ನೀಡಲಾಗಿದೆ.





