ಕೊಡಗಿನಲ್ಲಿ ನೀರಿಗಾಗಿ ಹಾಹಾಕಾರ: ವನ್ಯಜೀವಿಗಳು ತತ್ತರ

ಕುಶಾಲನಗರ, ಮಾ.1: ಬೇಸಿಗೆಯ ಬಿರುಬಿಸಿಲಿನ ನಡುವೆ ಕೊಡಗಿನಲ್ಲಿ ವನ್ಯಜೀವಿಗಳು ಅರಣ್ಯದೊಳಗೆ ನೀರಿಗಾಗಿ ಪರಿತಪಿಸುತ್ತಿರುವ ಪ್ರಮೇಯ ಎದುರಾಗಿದೆ.
ಜಿಲ್ಲೆಯ ವಿವಿಧ ಮೀಸಲು ಅರಣ್ಯಗಳಲ್ಲಿ ಪ್ರಾಣಿಪಕ್ಷಿಗಳ ಹಾಹಾಕಾರ ಭುಗಿಲೆದ್ದಿದೆ ಎನ್ನಬಹುದು. ದಿನ ಕಳೆದಂತೆ ಬಿಸಿಲಿನ ತಾಪ ಏರತೊಡಗಿದ್ದು, ಜಲಮೂಲಗಳು ಬತ್ತತೊಡಗಿವೆ. ಅರಣ್ಯದ ಒಳಭಾಗದಲ್ಲಿ ಪ್ರಾಕೃತಿಕ ಕೆರೆಗಳು ಬತ್ತುವುದರೊಂದಿಗೆ ಅರಣ್ಯ ಇಲಾಖೆ ನಿರ್ಮಿಸಿರುವ ನೀರಿನ ತೊಟ್ಟಿಗಳಲ್ಲೂ ನೀರಿನ ಸೆಲೆಗಳು ಕ್ಷೀಣಗೊಳ್ಳುತ್ತಿವೆ.
ಕುಶಾಲನಗರದ ಆನೆಕಾಡು, ಅತ್ತೂರು, ದುಬಾರೆ ಸೋಮವಾರಪೇಟೆ ವ್ಯಾಪ್ತಿಯ ಶನಿವಾರಸಂತೆ, ಯಡವನಾಡು ಅರಣ್ಯಗಳಲ್ಲಿ ಹಲವು ಕೆರೆಗಳು ಬತ್ತುತ್ತಿರುವ ಮುನ್ಸೂಚನೆ ಕಾರಣ ಪ್ರಾಣಿಪಕ್ಷಿಗಳು ನೀರಿಗಾಗಿ ಪರಿತಪಿಸುವ ಸ್ಥಿತಿ ಎದುರಾಗುತ್ತಿದೆ. ವಿಶೇಷವಾಗಿ ಕಾಡಾನೆಗಳು ಈ ವ್ಯಾಪ್ತಿಯಲ್ಲಿ ನೀರನ್ನು ಅರಸಿಕೊಂಡು ನಾಡಿಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.
ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ದುಬಾರೆ, ಅತ್ತೂರು, ಆನೆಕಾಡು, ಶನಿವಾರಸಂತೆ ವ್ಯಾಪ್ತಿಯ ಮೀಸಲು ಅರಣ್ಯಗಳಲ್ಲಿ ಅಂದಾಜು 100ಕ್ಕೂ ಅಧಿಕ ಕಾಡಾನೆಗಳು ವಾಸ್ತವ್ಯ ಹೂಡಿವೆ. ಇವುಗಳಿಗೆ ದಿನನಿತ್ಯಕ್ಕೆ ಆವಶ್ಯಕತೆಯಿರುವ ನೀರಿನ ಪ್ರಮಾಣದ ಅಲಭ್ಯತೆ ಉಂಟಾಗಿದೆ. ಇನ್ನೊಂದೆಡೆ ಮಾಲ್ದಾರೆ ಅರಣ್ಯ ವ್ಯಾಪ್ತಿಯಲ್ಲಿ 50ಕ್ಕೂ ಅಧಿಕ ಆನೆಗಳು ಠಿಕಾಣಿ ಹೂಡಿವೆ.
ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷಕ್ಕೆ ಯಾವುದೇ ಶಾಶ್ವತ ಪರಿಹಾರ ಒದಗಿಸಲು ಅರಣ್ಯ ಇಲಾಖೆ ವಿಫಲವಾಗಿದೆ. ಇನ್ನೊಂದೆಡೆ ಕಾಡಿನಲ್ಲಿ ಹಸಿರು ಉತ್ಪನ್ನಗಳನ್ನು ಬೆಳೆಸುವಲ್ಲಿ ಕೂಡ ಯಶಸ್ಸು ಕಾಣದಿರುವುದು ಈ ಅವಾಂತರಕ್ಕೆ ಪ್ರಮುಖ ಕಾರಣವಾಗಿದೆ. ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕೂಡ ಬಹುತೇಕ ಕ್ಷೀಣಿಸಿದ್ದು, ಇದರಿಂದ ಎಲ್ಲೆಡೆ ಜಲಮೂಲಗಳು ಬತ್ತಲು ಪ್ರಾರಂಭಗೊಂಡಿವೆ. ಅರಣ್ಯದ ಒಳಭಾಗದಲ್ಲಿ ಕೆರೆಗಳ ನಿರ್ಮಾಣವನ್ನು ಅರಣ್ಯ ಇಲಾಖೆ ಕೆಲವೆಡೆ ಮಾಡಿದೆ. ಈ ಕೆರೆಗಳ ನಿರ್ವಹಣೆಯನ್ನು ಮಾಡುವಲ್ಲಿ ಮಾತ್ರ ಇಲಾಖೆ ನಿರ್ಲಕ್ಷ್ಯ ತಾಳಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ವನ್ಯಜೀವಿಗಳ ಆವಾಸ ಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆರೆ ಅಥವಾ ನೀರಿನ ತೊಟ್ಟಿಗಳ ನಿರ್ಮಾಣ ಮಾಡಬೇಕಾಗಿದೆ ಎನ್ನುವುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ. ಹಲವು ಕಾರಣಗಳಿಂದ ಅರಣ್ಯ ನಾಶವಾಗುತ್ತಿರುವುದು ಕೂಡ ಅರಣ್ಯ ಪ್ರದೇಶಗಳಲ್ಲಿ ಜಲಮೂಲಗಳು ಬತ್ತಿಹೋಗಲು ಪ್ರಮುಖ ಅಂಶವಾಗಿದೆ ಎನ್ನಬಹುದು.
ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 14 ಕೆರೆಗಳು ಅರಣ್ಯದ ಒಳಭಾಗದಲ್ಲಿವೆ. ಕೆಲವು ಕೆರೆಗಳು ಈಗಾಗಲೇ ನೀರಿನ ಕೊರತೆಯಿಂದ ಒಣಗಿ ನಿಂತಿದೆ ಎನ್ನುತ್ತಾರೆ ಸೋಮವಾರಪೇಟೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ.
ಕಳೆದ ಬಾರಿ ಹಾಗೂ ಈ ಸಾಲಿನಲ್ಲಿ ಮಾಲ್ದಾರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 3 ಕೆರೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಯಾವುದೇ ಕೆರೆಯ ಕಾಮಗಾರಿ ಕೈಗೊಂಡಲ್ಲಿ ನೀರಿನ ಸೆಲೆ ಬತ್ತಿ ಹೋಗುವ ಸಾಧ್ಯತೆ ಅಧಿಕವಿರುವ ಹಿನ್ನೆಲೆಯಲ್ಲಿ ನಿರ್ವಹಣೆ ಕೈಗೆತ್ತಿಕೊಂಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಆದರೂ ಕುಶಾಲನಗರ ಸಮೀಪದ ಅರಣ್ಯಗಳಲ್ಲಿ, ಮಾಲ್ದಾರೆ ವ್ಯಾಪ್ತಿಯ ಅರಣ್ಯದಲ್ಲಿರುವ ಕೆರೆಗಳಲ್ಲಿ ಅಲ್ಪಪ್ರಮಾಣದ ನೀರಿನ ಸಂಗ್ರಹವಿದೆ. ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೊಸ ಕೆರೆಗಳನ್ನು ನಿರ್ಮಾಣ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ನಿಟ್ಟಿನಲ್ಲಿ ಅನುದಾನಕ್ಕಾಗಿ ಇಲಾಖೆ ಕಾಯುತ್ತಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಭಾಗದಲ್ಲಿ ಕಾಡ್ಗಿಚ್ಚು ಹಬ್ಬದಂತೆ ಎಚ್ಚರ ವಹಿಸಲು ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ನೆಹರೂ ತಿಳಿಸಿದ್ದಾರೆ. ಅರಣ್ಯ ರಕ್ಷಣೆಯೊಂದಿಗೆ ವನ್ಯಜೀವಿಗಳ ರಕ್ಷಣೆಗೆ ಇಲಾಖೆ ಎಲ್ಲ ರೀತಿಯಲ್ಲಿ ಎಚ್ಚರದ ಕ್ರಮ ವಹಿಸಿದೆ ಎಂದು ತಿಳಿಸಿದ್ದಾರೆ.
ಅತ್ತೂರು ಅರಣ್ಯ ವಲಯದಲ್ಲಿ ಕಾಡಾನೆಗಳು ನಾಡಿಗೆ ಆಹಾರ ಅರಸಿಕೊಂಡು ಬರುತ್ತಿವೆ. ಈ ನಿಟ್ಟಿನಲ್ಲಿ ಕಾಡಿನ ಅಂಚಿನಲ್ಲಿರುವ ಹೊಸಕಾಡು ಬಳಿ ನೀರಿನ ತೊಟ್ಟಿಯೊಂದನ್ನು ನಿರ್ಮಿಸಿದಲ್ಲಿ ವನ್ಯಜೀವಿಗಳಿಗೆ ನೀರು ಒದಗಿಸಿದಂತಾಗುತ್ತದೆ ಎನ್ನುವುದು ನಿವೃತ್ತ ಅರಣ್ಯ ಸಿಬ್ಬಂದಿ ಸೀತಾರಾಂ ಎಂಬವರ ಅಭಿಪ್ರಾಯವಾಗಿದೆ.
ಕೊಡಗು ಜಿಲ್ಲೆಯಲ್ಲಿ ಪರಿಸರದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿಗಳನ್ನು ರಕ್ಷಿಸುವ ಸಂಬಂಧ ಸರಕಾರ ವಿಶೇಷ ಅನುದಾನ ಕಲ್ಪಿಸಬೇಕಾಗಿದೆ ಎನ್ನುವುದು ಸ್ಥಳೀಯ ಪರಿಸರವಾದಿಗಳ ಆಗ್ರಹ.







