28 ಕೋಟಿ ರೂ. ಕ್ರಿಯಾ ಯೋಜನೆಗೆ ಪ್ರಸ್ತಾವನೆ ಸಲ್ಲಿಕೆ : ಅಧ್ಯಕ್ಷೆ ಶಶಿಕಲಾ ವಿ. ಕವಳಿ
ಶಿವಮೊಗ್ಗ, ಮಾ.1: ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಮುಂದಿನ ಐದು ವರ್ಷಗಳಿಗೆ 28 ಕೋಟಿ ರೂ. ಕ್ರಿಯಾಯೋಜನೆ ರೂಪಿಸಿ ಕೇಂದ್ರ ಸರಕಾರಕ್ಕೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಮಂಡಳಿಯ ಅಧ್ಯಕ್ಷೆ ಶಶಿಕಲಾ ವಿ.ಕವಳಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಂಡಳಿಯ ವತಿಯಿಂದ ವಿವಿಧ ಕಾರ್ಯಕ್ರಮ ರೂಪಿಸಲಾಗಿದ್ದು, ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಅನುದಾನ ಮಂಜೂರು ಮಾಡುವಂತೆ ಕೋರಲಾಗಿದೆ ಎಂದರು.
ಮಂಡಳಿಯ ವತಿಯಿಂದ ರೈತರಿಗೆ ಅನೇಕ ಸೌಲಭ್ಯ ನೀಡಲಾಗುತ್ತಿದೆ. ಪ್ರಮುಖವಾಗಿ ಯಾಂತ್ರೀಕರಣಕ್ಕೆ ಶೇ.40ರಷ್ಟು ಸಹಾಯಧನ, ಟಾರ್ಪಲಿನ್ ವಿತರಣೆ, ಸಾಂಬಾರು ಪದಾರ್ಥಗಳ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಸಹಾಯಧನ ಸೇರಿದಂತೆ ಹಲವು ಸೌಲಭ್ಯಗಳನ್ನು ರೈತರಿಗೆ ನೀಡಲಾಗುತ್ತಿದೆ ಎಂದರು. ವಿದೇಶಗಳಿಗೆ ಸಾಂಬರು ಪದಾರ್ಥಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ರಾಜ್ಯ ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದೇನೆ. ಮಂಡಳಿಯ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿದ್ದು, ಆಡಳಿತಾತ್ಮಕ ಕಾರ್ಯಗಳಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಭಾಗ ಕಚೇರಿ ಪ್ರಾರಂಭಿಸಲು ಸರಕಾರದ ಅನುಮತಿ ಪಡೆಯಲಾಗಿದೆ ಎಂದವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್. ನಾಯಕ,ವ್ಯವಸ್ಥಾಪಕ ರವೀಂದ್ರ ಹಕಾಟೆ. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.







