ಶೂಟಿಂಗ್ ವಿಶ್ವಕಪ್: ಜಿತು ರಾಯ್‌ಗೆ ಚಿನ್ನ

ಹೊಸದಿಲ್ಲಿ, ಮಾ.1: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಅಪೂರ್ವ ಪ್ರದರ್ಶನ ನೀಡಿದ ಭಾರತದ ಶೂಟರ್ ಜಿತು ರಾಯ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಸಹ ಆಟಗಾರ ಅಮನ್‌ಪ್ರೀತ್ ಸಿಂಗ್ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಬುಧವಾರ ಇಲ್ಲಿ ನಡೆದ 50 ಮೀ. ಪುರುಷರ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಆರ್ಮಿಯ ಜಿತು ರಾಯ್ 230.1 ಅಂಕವನ್ನು ಗಳಿಸಿ ಅಗ್ರ ಸ್ಥಾನ ಪಡೆದರು. ಈ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು.
ಮಂಗಳವಾರ 10 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಜಿತು ಇದೀಗ ಸತತ 2ನೆ ದಿನವೂ ಪದಕವನ್ನು ಬಾಚಿಕೊಂಡು ಟೂರ್ನಿಯನ್ನು ಸ್ಮರಣೀಯವಾಗಿಸಿಕೊಂಡರು.
50 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಅಮನ್‌ಪ್ರೀತ್ ಸಿಂಗ್ ಒಟ್ಟು 226.9 ಅಂಕವನ್ನು ಗಳಿಸಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ತನ್ನ ಮೊದಲ ವಿಶ್ವಕಪ್ ಪಂದ್ಯದಲ್ಲಿ ಸಿಂಗ್ ಉತ್ತಮ ಸಾಧನೆ ಮಾಡಿ ಗಮನ ಸೆಳೆದರು. ಇರಾನ್‌ನ ವಹಿದ್ ಗೊಲ್ಖಂಡನ್ 208.0 ಅಂಕ ಗಳಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಇದಕ್ಕೆ ಮೊದಲು ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಒಟ್ಟು 561 ಅಂಕ ಗಳಿಸಿದ್ದ ಅಮನ್‌ಪ್ರೀತ್ ಹಾಗೂ ಜೀತು(559 ಅಂಕ) ಕ್ರಮವಾಗಿ ಮೊದಲನೆ ಹಾಗೂ ಎರಡನೆ ಸ್ಥಾನ ಪಡೆದಿದ್ದರು.
ಅರ್ಹತಾ ಸುತ್ತಿನ ಮೊದಲೆರಡು ಸುತ್ತಿನ ಅಂತ್ಯಕ್ಕೆ 29ರ ಹರೆಯದ ರಾಯ್ 6ನೆ ಸ್ಥಾನ ಪಡೆದರು. ಈ ಹಂತದಲ್ಲಿ 98.9 ಅಂಕ ಗಳಿಸಿದ್ದ ಅಮನ್‌ಪ್ರೀತ್ ಸಿಂಗ್ 8 ಶೂಟರ್‌ಗಳ ಸ್ಪರ್ಧೆಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಎಲಿಮಿನೇಶನ್ ಸುತ್ತಿನಲ್ಲಿ 10.8 ಅಂಕ ಗಳಿಸಿದ ಜಿತು ಆರನೆ ಸ್ಥಾನದಿಂದ 3ನೆ ಸ್ಥಾನಕ್ಕೆ ಭಡ್ತಿ ಪಡೆದರು.
ಜಿತು ಇದೀಗ ಒಟ್ಟು 9 ವಿಶ್ವಕಪ್ ಪದಕಗಳನ್ನು ಜಯಿಸಿದ್ದಾರೆ. ಕಳೆದ ವರ್ಷ 7 ಪದಕಗಳನ್ನು ಗೆದ್ದುಕೊಂಡಿದ್ದ ಜಿತು ಈ ವರ್ಷ ಎರಡನೆ ಪದಕ ಜಯಿಸಿದರು. 2016ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಜಿತು ರಾಯ್ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಆದರೆ, ಫೈನಲ್ಸ್‌ನಲ್ಲಿ 8ನೆ ಸ್ಥಾನ ಪಡೆದಿದ್ದರು.
ಜಿತು ಚಿನ್ನದ ಪದಕ ಗೆಲ್ಲುವುದರೊಂದಿಗೆ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತದ ಖಾತೆಗೆ ಒಟ್ಟು 5 ಪದಕಗಳು ಜಮೆಯಾಗಿವೆ.
‘‘ನನ್ನ ಅಭಿಮಾನಿಗಳ ಸಮ್ಮುಖದಲ್ಲಿ ಭಾರತದಲ್ಲಿ ನಡೆಯುತ್ತಿರುವ ಮೊದಲ ಸಂಯುಕ್ತ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಜಯಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇದೊಂದು ಮಹಾ ಗೌರವ. 2016ರ ಋತುವಿನಲ್ಲಿ ವಿಶ್ವಕಪ್ ಫೈನಲ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿ ಆ ವರ್ಷವನ್ನು ಕೊನೆಗೊಳಿಸಿದ್ದೆ. 2017ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಬೇಕೆಂಬ ಕನಸುಕಂಡಿದ್ದೆ.
ಈ ವರ್ಷ ಎಲ್ಲ ವಿಶ್ವಕಪ್‌ಗಳಲ್ಲಿ ಆಡಬೇಕೆಂಬ ಯೋಜನೆ ಹಾಕಿಕೊಂಡಿರುವೆ. ಮ್ಯೂನಿಕ್‌ನಲ್ಲಿ ಶೂಟಿಂಗ್ ವಿಶ್ವಕಪ್ ನಡೆಯಲಿದೆ. ಅಲ್ಲಿಗೆ ತೆರಳುವ ಮೊದಲು ಕೆಲವೊಂದು ತಪ್ಪುಗಳನ್ನು ಸರಿಪಡಿಸಿಕೊಳ್ಳುವೆ. ಋತುವಿನ ಉಳಿದ ಪಂದ್ಯಗಳತ್ತ ಗಮನ ಹರಿಸುವೆ’’ ಎಂದು ಜಿತು ರಾಯ್ ಹೇಳಿದ್ದಾರೆ.







