ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಐಜಿಪಿ ಸಲೀಮ್

ಸೊರಬ, ಮಾ.1: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮಹತ್ವದ ಜವಾಬ್ದಾರಿ ಪೊಲೀಸ್ ಇಲಾಖೆಯದ್ದಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಎಂ.ಎ. ಸಲೀಮ್ ನುಡಿದರು.
ಬುಧವಾರ ಪಟ್ಟಣದ ರಂಗಮಂದಿರದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ರೋಟರಿ ಕ್ಲಬ್ ಸೊರಬ ಇವರ ಸಹಯೋಗದೊಂದಿಗೆ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ತರಬೇತಿ ಶಿಬಿರಗಳನ್ನು ಆಯೋಜನೆ ಮಾಡುವ ಉದ್ದೇಶ ಪೊಲೀಸ್ ಇಲಾಖೆಯೊಂದಿಗೆ ಕೈಜೊಡಿಸುವುದು. ಬಂದೂಕು ತರಬೇತಿ ಪಡೆಯುವುದರಿಂದ ಪ್ರತಿಯೊಬ್ಬರಿಗೂ ತಮ್ಮ ಆತ್ಮ ರಕ್ಷಣೆ ಹಾಗೂ ಕಠಿಣ ಸಂದಭರ್ಗಳಲ್ಲಿ ಸಹಕಾರಿಯಾಗುತ್ತದೆ. ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಸುವಲ್ಲಿ ಪೊಲೀಸರಲ್ಲದೇ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ. ಮನುಷ್ಯ ತನ್ನ ಜೀವನದಲ್ಲಿ ಶಿಸ್ತಿಗೆ ಹೆಚ್ಚಿನ ಮಹತ್ವ ನೀಡಿದಾಗ ಉತ್ತಮ ಸಮಾಜ ರೂಪಿಸಲು ಸಾಧ್ಯ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶಿಸ್ತಿಗೆ ಹೆಚ್ಚಿನ ಮಹತ್ವವಿದ್ದು, ನಾವು ಕೂಡ ಶಿಸ್ತಿನ ಕಡಗೆ ಹೆಚ್ಚಿ ನ ಗಮನ ಹರಿಸಬೇಕಿದೆ.
ಪ್ರಪಂಚಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಶೇ 1ರಷ್ಟು ವಾಹನಗಳಿದ್ದರೂ ಅಪಘಾತಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಸಂಚಾರಿ ನಿಯಮ ಒಂದೇ ದಾರಿಯಾಗಿದ್ದು, ಪ್ರತಿಯೊಬ್ಬ ವಾಹನ ಸವಾರರೂ ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕರೆ ನೀಡಿದ ಅವರು ನಗರಗಳಿಗೆ ಹೋಲಿಸಿದರೆ ಪಟ್ಟಣ ಪ್ರದೇಶದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ 144 ಜನ ಶಿಬಿರಾರ್ಥಿಗಳು ಬಂದೂಕು ತರಬೇತಿಯಲ್ಲಿ ಪಾಲ್ಗೊಂಡಿರುವುದು ಅತೀವ ಸಂತಸ ತಂದಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ. ಜ್ಞ್ಞಾನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭದ್ರಾವತಿ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಸೊರಬ ಅತೀ ಹೆಚ್ಚು ಬಂದೂಕು ತರಬೇತಿ ಶಿಬಿರಗಳನ್ನು ನಡೆಸಿದ 2ನೆ ತಾಲೂಕಾಗಿದೆ. ಶಿಬಿರಾರ್ಥಿಗಳು ಪ್ರಥಮವಾಗಿ ಇದರಿಂದ ಶಿಸ್ತನ್ನು ಕಲಿಯುವಂತಾಗಿದೆ. ವೃತ್ತಿ, ಧರ್ಮ ಯಾವುದಾದರೇನು ವ್ಯಕ್ತಿಯು ಮನುಷ್ಯತ್ವಕ್ಕೆ ಮೊದಲ ಆದ್ಯತೆ ನೀಡುವ ಜೊತೆಗೆ ಕರ್ತವ್ಯ ಪಾಲಿಸಬೇಕು ಎಂದರು.
ಈ ಸಂದಭರ್ದಲ್ಲಿ ಹಿರಿಯ ವೈದ್ಯ ಡಾ. ಎಂ.ಕೆ ಭಟ್, ರೋಟರಿ ಕ್ಲಬ್ ಕಾರ್ಯದರ್ಶಿ ಶೇಷಾಚಲ, ಶಿಕಾರಿಪುರ ಡಿವೈಎಸ್ಪಿ ಸುಧಾಕರ್ ನಾಯ್ಕ್ಕಿ, ಶಿವಮೊಗ್ಗ ಡಿಆರ್‌ನ ಡಿವೈಎಸ್ಪಿ ಶ್ರೀನಿವಾಸ್, ಪ್ರಮುಖರಾದ ಪ್ರಕಾಶ್, ಕರಿಬಸವರಾಜ್ ಅರಸ್, ಎಂ. ಲಕ್ಷ್ಮೀಕಾಂತ್, ಸಿಪಿಐ ಗಣೇಶಪ್ಪ, ಜಿ, ಗುರುಮೂರ್ತಿ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.







