ಈಜಲು ಹೋದ ಇಬ್ಬರ ಸಾವು
ಕುಶಾಲನಗರ, ಮಾ.1: ಕೊಡಗಿನ ಪ್ರವಾಸಿ ತಾಣವಾದ ದುಬಾರೆಯಿಂದ ಕುಶಾಲನಗರದ ಕಡೆಗೆ ಹರಿದು ಬರುವ ಕಾವೇರಿ ಹೊಳೆಯ ಅಂಚಿನಲ್ಲಿ ಇಬ್ಬರ ಮೃತ ದೇಹಗಳು ಸುಮಾರು ಒಂದು ಕಿ.ಮೀ. ದೂರದಲ್ಲಿ ಪತ್ತೆಯಾದ ಕುರಿತು ವರದಿಯಾಗಿದೆ.
ಮೃತರಲ್ಲಿ ಒಬ್ಬ ಕಂಬಿಬಾಣೆ ಗ್ರಾಮದ ದಿನೇಶ್ ಮತ್ತು ಪುಷ್ಪಾ ದಂಪತಿಯ ಪುತ್ರ(19) ಮತ್ತೊಬ್ಬ ಸೂರ್ಲಬ್ಬಿ ಗ್ರಾಮದ ಈರಪ್ಪ ಎಂಬವರ ಪುತ್ರ ಗಿರೀಶ್ (22) ಎಂದು ಗುರುತಿಸಲಾಗಿದೆ. ಎಂದಿನಂತೆ 4 ಜನ ಸ್ನೇಹಿತರು ಸೇರಿ ಗಾರೆ ಕೆಲಸಕ್ಕೆ ತೆರಳುತ್ತಿದ್ದರು. ಕೆಲಸ ಇಲ್ಲದ ಕಾರಣ ಹೊಸ ಪಟ್ಟಣದ ಕಾವೇರಿ ನದಿ ದಡಕ್ಕೆ ತೆರಳಿ, ಹೊಳೆಗೆ ಇಳಿದಿದ್ದಾರೆ. ಬಳಿಕ ಕಾಲು ಜಾರಿ ಬಿದ್ದು, ಒಬ್ಬರನ್ನು ಒಬ್ಬರು ರಕ್ಷಿಸಿಕೊಳ್ಳಲು ಮುಂದಾದಾಗ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನುಳಿದ ಇಬ್ಬರು ಸ್ನೇಹಿತರು ಉಮೇಶ್ ಮತ್ತು ಸಿಬಿನ್ ಎಂಬವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮಾಂತರ ಠಾಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ಮಹಜರು ನಡೆಸಲಾಯಿತು. ಸ್ಥಳೀಯ ರ್ಯಾಫ್ಟಿಂಗ್ ಗೈಡ್‌ನ ಸಹಾಯದಿಂದ ದೇಹಗಳನ್ನು ನೀರಿನಿಂದ ಹೊರತೆಗೆಯಲಾಯಿತು. ಬಳಿಕ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತ ದೇಹಗಳನ್ನು ವಾರಸುದಾರರಿಗೆ ನೀಡಲಾಯಿತು.





