ಮಾ. 6ರಂದು ಮಂಗಳೂರು ಟೆಸ್ಟಿಂಗ್ ಸೆಂಟರ್ ಶುಭಾರಂಭ
ಮಂಗಳೂರು, ಮಾ.1: ಚಿನ್ನಾಭರಣಗಳ ಗುಣಮಟ್ಟ ಪರೀಕ್ಷಕ ಸಂಸ್ಥೆ ಮಂಗಳೂರು ಟೆಸ್ಟಿಂಗ್ ಸೆಂಟರ್ (ಎಂಟಿಸಿ) ನಗರದ ಜಿಎಚ್‌ಎಸ್ ಕ್ರಾಸ್ ರಸ್ತೆಯಲ್ಲಿ ಮಾ. 6ರಂದು ಶುಭಾರಂಭಗೊಳ್ಳಲಿದೆ ಎಂದು ಕೇಂದ್ರದ ಪಾಲುದಾರ ಬಿ.ಸಿ. ಶ್ರೀಧರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಚಿನ್ನದ ಗುಣಮಟ್ಟ ಪರೀಕ್ಷೆ ನಡೆಸುವ ಅತ್ಯಾಧುನಿಕ ಯಂತ್ರಗಳನ್ನು ಬಳಸುವ ನಗರದ ಪ್ರಥಮ ಸಂಸ್ಥೆ ಇದಾಗಿದ್ದು, ಬ್ಯಾಂಕ್‌ಗಳಲ್ಲಿ ಅಡವಿಟ್ಟ ಚಿನ್ನಾಭರಣಗಳ ವೌಲ್ಯಮಾಪನಕ್ಕೂ ಈ ಯಂತ್ರ ಬಳಸಬಹುದಾಗಿದೆ. ಈ ಯಂತ್ರವನ್ನು ದೇವಾಲಯಗಳಿಗೆ ಒಯ್ದು ಅಲ್ಲಿನ ಆಭರಣಗಳ ಗುಣಮಟ್ಟ ತಪಾಸಣೆ ಮಾಡುವ ಯೋಜನೆಯನ್ನೂ ಹೊಂದಲಾಗಿದೆ. ಈ ಬಗ್ಗೆ ಈಗಾಗಲೇ ಮುಜುರಾಯಿ ಇಲಾಖೆಯನ್ನು ಸಂಪರ್ಕಿಸಲಾಗಿದೆ. ಸಂಸ್ಥೆಯು ಲೇಸರ್ ವೆಲ್ಟಿಂಗ್ ಯಂತ್ರವನ್ನೂ ಹೊಂದಿದೆ ಎಂದವರು ಹೇಳಿದರು. ಸಂಸ್ಥೆಯು ಚಿನ್ನದ ಸಾಲ ಯೋಜನೆಯನ್ನು ಆರಂಭಿಸಲಿದ್ದು, ಇದು ಅತ್ಯಂತ ಪಾರದರ್ಶಕವಾಗಿದ್ದು, ಆಭರಣ ಅಡವಿಟ್ಟ ಗ್ರಾಹಕರ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುವ ಸೌಲಭ್ಯ ಇದಾಗಿರುತ್ತದೆ ಎಂದು ಸಂಸ್ಥೆಯ ಮತ್ತೋರ್ವ ಪಾಲುದಾರ ಸತೀಶ್ ರಾವ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಾಲುದಾರ ರಕ್ಷಿತ್ ಸೂರ್ಯ ಉಪಸ್ಥಿತರಿದ್ದರು.





