ಅಡುಗೆ ಅನಿಲ ಸಿಲಿಂಡರ್ ಮತ್ತಷ್ಟು ದುಬಾರಿ
ಸಬ್ಸಿಡಿರಹಿತ ಎಲ್ಪಿಜಿಗೆ ರೂ. 86 ಹೆಚ್ಚಳ

ಹೊಸದಿಲ್ಲಿ, ಮಾ.2: ಸಬ್ಸಿಡಿರಹಿತ ಎಲ್ಪಿಜಿ ಮತ್ತಷ್ಟು ದುಬಾರಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಕೂಡಾ ರಿಫಿಲ್ಲಿಂಗ್ ದರವನ್ನು ಬುಧವಾರ 86 ರೂ. ಹೆಚ್ಚಿಸಿದ್ದು, ಇದೀಗ ಸಬ್ಸಿಡಿರಹಿತ ಸಿಲಿಂಡರ್ ಬೆಲೆ 737.5 ರೂಪಾಯಿ ಆಗಲಿದೆ.
ಒಂದೇ ಕಂತಿನಲ್ಲಿ ಆಗಿರುವ ಅತಿದೊಡ್ಡ ಪ್ರಮಾಣದ ಹೆಚ್ಚಳ ಇದಾಗಿದ್ದು, ಈಗಾಗಲೇ ಸಬ್ಸಿಡಿ ತ್ಯಜಿಸಿರುವ ಕುಟುಂಬಗಳ ಪಾಲಿಗೆ ಮತ್ತು ವರ್ಷಕ್ಕೆ 12ಕ್ಕಿಂತ ಅಧಿಕ ಸಿಲಿಂಡರ್ ಬಳಸುವ ಕುಟುಂಬಗಳ ಪಾಲಿಗೆ ಇದು ದುಬಾರಿಯಾಗಲಿದೆ. ದೇಶದಲ್ಲಿ ಈಗಾಗಲೇ ಒಂದು ಕೋಟಿಗೂ ಅಧಿಕ ಕುಟುಂಬಗಳು ಸ್ವಯಂಪ್ರೇರಿತವಾಗಿ ಎಲ್ಪಿಜಿ ಸಬ್ಸಿಡಿ ತ್ಯಜಿಸಿದ್ದು, ವಾರ್ಷಿಕ 10 ಲಕ್ಷ ರೂ.ಗಿಂತ ಅಧಿಕ ಆದಾಯ ಇರುವ ಕುಟುಂಬಗಳಿಗೆ ಸಬ್ಸಿಡಿ ಅನ್ವಯಿಸುವುದಿಲ್ಲ.
ಬೆಲೆ ಏರಿಕೆಗೆ ಮುನ್ನ ಸಬ್ಸಿಡಿರಹಿತ ಎಲ್ಪಿಜಿ ಸಿಲಿಂಡರ್ ದರ 651.50 ರೂ. ಆಗಿತ್ತು. ಚಿಲ್ಲರೆ ಮಾರಾಟಗಾರರು ಸಬ್ಸಿಡಿಯುಕ್ತ ಅಡುಗೆ ಅನಿಲ ದರವನ್ನು 13 ಪೈಸೆಯಷ್ಟು ಹೆಚ್ಚಿಸಿದ್ದು, 14.2 ಕೆ.ಜಿ. ಸಿಲಿಂಡರ್ ಬೆಲೆ 434.93 ರೂ. ಆಗಲಿದೆ.
2016ರ ಅಕ್ಟೋಬರ್ನಿಂದ ಅಡುಗೆ ಅನಿಲ ದರ ಏರುಮುಖದಲ್ಲೇ ಸಾಗಿದ್ದು, ಸೆಪ್ಟೆಂಬರ್ನಲ್ಲಿ ಸಬ್ಸಿಡಿರಹಿತ ಸಿಲಿಂಡರ್ ಬೆಲೆ 466.5 ರೂ. ಇತ್ತು. ಆ ಬಳಿಕ ಆರು ಕಂತುಗಳಲ್ಲಿ ಸುಮಾರು 271 ರೂ. ಅಂದರೆ ಶೇಕಡ 58ರಷ್ಟು ಹೆಚ್ಚಿಸಿದಂತಾಗಿದೆ. ಸಬ್ಸಿಡಿಯುಕ್ತ ಅಡುಗೆ ಅನಿಲ ದರ ಸಿಲಿಂಡರ್ಗೆ 2 ರೂಪಾಯಿಯಂತೆ ಎಂಟು ಬಾರಿ ಹೆಚ್ಚಳವಾಗಿದೆ. ಫೆಬ್ರವರಿ ಒಂದರಂದು ಶೇಕಡ 3 ದರ ಹೆಚ್ಚಳದ ಮೂಲಕ ವಿಮಾನ ಇಂಧನ ದರ ಕಿಲೋ ಲೀಟರ್ಗೆ 214 ರೂಪಾಯಿಯಷ್ಟು ಹೆಚ್ಚಿ 54,293.38 ರೂಪಾಯಿ ಆಗಿದೆ.