ನಗದು ವ್ಯವಹಾರ ಮಾಡುವ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಬ್ಯಾಂಕ್ ಗಳು !
ವಿವರಗಳಿಗೆ ಕ್ಲಿಕ್ ಮಾಡಿ

ಹೊಸದಿಲ್ಲಿ, ಮಾ.2: ದೇಶದಲ್ಲಿ ನಗದುರಹಿತ ವಹಿವಾಟನ್ನು ಉತ್ತೇಜಿಸುವ ಸಲುವಾಗಿ ಬ್ಯಾಂಕುಗಳು ನಿರ್ದಿಷ್ಟ ಪ್ರಮಾಣಕ್ಕಿಂತ ಅಧಿಕ ಮೊತ್ತದ ನಗದು ವಹಿವಾಟಿಗೆ ಶುಲ್ಕ ವಿಧಿಸಲು ಆರಂಭಿಸಿವೆ. ಎಚ್‌ಡಿಎಫ್‌ಸಿ, ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕ್ ಈಗಾಗಲೇ ಹೊಸ ಶುಲ್ಕ ವಿಧಿಸುವುದನ್ನು ಜಾರಿಗೆ ತಂದಿವೆ. ಇತರ ಬ್ಯಾಂಕುಗಳು ಕೂಡಾ ಇದನ್ನು ಅನುಸರಿಸುವ ಸಾಧ್ಯತೆ ಇದೆ.
ಎಚ್‌ಡಿಎಫ್‌ಸಿ ಬ್ಯಾಂಕಿನ ಹೇಳಿಕೆ ಪ್ರಕಾರ, ಖಾತೆದಾರರು ತಾವು ಖಾತೆ ಹೊಂದಿರುವ ಶಾಖೆಗಳಲ್ಲಿ ನಾಲ್ಕು ವಹಿವಾಟು ನಡೆಸಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಆದರೆ ಹೆಚ್ಚುವರಿ ವಹಿವಾಟಿಗೆ 150 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಗ್ರಾಹಕರು ತಮ್ಮ ಉಳಿತಾಯ ಖಾತೆ ಅಥವಾ ವೇತನ ಖಾತೆಗೆ ಮಾಸಿಕ 2 ಲಕ್ಷ ರೂ. ಠೇವಣಿ ಇಡಬಹುದಾಗಿದೆ ಅಥವಾ ಅಷ್ಟು ಮೊತ್ತದ ಹಣವನ್ನು ಖಾತೆಯಿಂದ ಪಡೆಯಬಹುದಾಗಿದೆ. ಈ ಮೊತ್ತವನ್ನು ಮೀರಿದರೆ 1,000 ರೂಪಾಯಿಗೆ 5 ರೂಪಾಯಿ ಶುಲ್ಕ ಅಥವಾ ಕನಿಷ್ಠ 150 ರೂಪಾಯಿ ಪಾವತಿಸಬೇಕಾಗುತ್ತದೆ. ಇದಕ್ಕೂ ಮುನ್ನ ಈ ಮಿತಿ 50 ಸಾವಿರ ಇತ್ತು. ಖಾತೆ ಹೊಂದಿರುವ ಶಾಖೆಯಲ್ಲದೇ ಇತರ ಶಾಖೆಗಳಲ್ಲಿ ವಹಿವಾಟು ನಡೆಸುವುದಾದರೆ, ದಿನಕ್ಕೆ 25 ಸಾವಿರ ರೂಪಾಯಿ ವರೆಗಿನ ವಹಿವಾಟಿಗೆ ಶುಲ್ಕ ಇಲ್ಲ. ಆದರೆ ಇದಕ್ಕಿಂತ ಅಧಿಕ ಮೊತ್ತದ ವಹಿವಾಟು ನಡೆಸುವುದಾದರೆ ಪ್ರತಿ 1,000 ರೂಪಾಯಿಗೆ 5 ರೂಪಾಯಿನಂತೆ ಅಥವಾ ಕನಿಷ್ಠ 150 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಮಕ್ಕಳು ಹಾಗೂ ಹಿರಿಯ ನಾಗರಿಕರ ಮೇಲೆ ಯಾವುದೇ ಮೊತ್ತಕ್ಕೆ ಶುಲ್ಕ ವಿಧಿಸುವುದಿಲ್ಲ.
"ಖಾತೆ ಹೊಂದಿರುವ ಶಾಖೆಯಲ್ಲಿ ತಿಂಗಳ ಮೊದಲ ನಾಲ್ಕು ವಹಿವಾಟಿಗೆ ಯಾವುದೇ ಶುಲ್ಕ ಇಲ್ಲ. ಆದರೆ ಹೆಚ್ಚುವರಿ ವಹಿವಾಟಿಗೆ ಪ್ರತಿ 1,000 ರೂ.ಗೆ ಐದು ರೂಪಾಯಿಯಂತೆ ಅಥವಾ ಕನಿಷ್ಠ ತಿಂಗಳಿಗೆ 150 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಥರ್ಡ್ ಪಾರ್ಟಿ ಮಿತಿ ದಿನಕ್ಕೆ 50 ಸಾವಿರ ರೂ. ಆಗಿರುತ್ತದೆ. ಇತರ ಶಾಖೆಗಳಲ್ಲಿ ನಡೆಸುವ ತಿಂಗಳ ಮೊದಲ ವಹಿವಾಟಿಗೆ ಯಾವುದೇ ಶುಲ್ಕ ಇಲ್ಲ. ಬಳಿಕ ಪ್ರತಿ 1,000ಕ್ಕೆ 5 ರೂಪಾಯಿನಂತೆ ಕನಿಷ್ಠ 150 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಯಾವುದೇ ಇತರ ಶಾಖೆಗಳಲ್ಲಿ ಖಾತೆಗೆ ಹಣ ಠೇವಣಿ ಮಾಡುವುದಾದರೆ 1,000ಕ್ಕೆ 5 ರೂಪಾಯಿ ಶುಲ್ಕ (ಕನಿಷ್ಠ 150 ರೂಪಾಯಿ) ಪಾವತಿಸಬೇಕಾಗುತ್ತದೆ. ಎಟಿಎಂ ಮೂಲಕ ಠೇವಣಿ ಇಟ್ಟರೆ ತಿಂಗಳ ಮೊದಲ ವಹಿವಾಟಿಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಬಳಿಕ 1,000ಕ್ಕೆ 5 ರೂಪಾಯಿ ಶುಲ್ಕ ಪಾವತಿಸಬೇಕು" ಎಂದು ಐಸಿಐಸಿಐ ಬ್ಯಾಂಕ್ ಸ್ಪಷ್ಟಪಡಿಸಿದೆ.
ಆಕ್ಸಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರು ಖಾತೆ ಹೊಂದಿರುವ ಶಾಖೆಗಳಲ್ಲಿ 1 ಲಕ್ಷ ರೂಪಾಯಿವರೆಗೆ ವಹಿವಾಟು ನಡೆಸಬಹುದು. ಆದರೆ ಹೆಚ್ಚುವರಿ ವಹಿವಾಟಿಗೆ ಪ್ರತಿ 1,000 ರೂ.ಗೆ ಐದು ರೂಪಾಯಿಯಂತೆ ಅಥವಾ ಕನಿಷ್ಠ ತಿಂಗಳಿಗೆ 150 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ನಾಲ್ಕಕ್ಕಿಂತ ಹೆಚ್ಚು ವಹಿವಾಟು ನಡೆಸಿದರೆ ಪ್ರತಿ ವಹಿವಾಟಿಗೆ 150 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.