ವರದಕ್ಷಿಣೆ ಹಿಂದಿರುಗಿಸಿ ಮಾದರಿಯಾದ ಝಾರ್ಖಂಡ್ ನ 300 ಮುಸ್ಲಿಂ ಕುಟುಂಬಗಳು
ಉಲೇಮಾಗಳು, ಸಮಾಜ ಸೇವಕರು, ಊರವರ ಒಗ್ಗಟ್ಟಿನ ಫಲ

ರಾಂಚಿ, ಮಾ.2: ಝಾರ್ಖಂಡ್ ರಾಜ್ಯದ ಪಲಮು ಪ್ರಾಂತದಲ್ಲಿ ವಾಸಿಸುತ್ತಿರುವ ಮುಸ್ಲಿಮ್ ಸಮುದಾಯದಲ್ಲಿ ಒಂದು ವಿಶಿಷ್ಟ ಸಾಮಾಜಿಕ ಬದಲಾವಣೆಯ ಗಾಳಿ ಮೌನವಾಗಿ ಬೀಸುತ್ತಿದೆ. ಇಲ್ಲಿನ ನೂರಾರು ಕುಟುಂಬಗಳು ತಮ್ಮ ಪುತ್ರರ ವಿವಾಹ ಸಮಯದಲ್ಲಿ ತಾವು ಪಡೆದಿದ್ದ ವರದಕ್ಷಿಣೆಯನ್ನು ಹಿಂದಿರುಗಿಸುತ್ತಿದ್ದಾರೆ.
ಕಳೆದೊಂದು ವರ್ಷದಿಂದ ಸುಮಾರು 800 ಕುಟುಂಬಗಳು ತಾವು ವರದಕ್ಷಿಣೆ ಸ್ವೀಕರಿಸಿದ್ದನ್ನು ಬಹಿರಂಗವಾಗಿ ಒಪ್ಪಿಕೊಂಡು ನಂತರ ಅದನ್ನು ಹಿಂದಿರುಗಿಸಿವೆ. ಇಲ್ಲಿಯ ತನಕ ರೂ. 6 ಕೋಟಿಗೂ ಮಿಕ್ಕಿ ನಗದು ಹಣವನ್ನು ವಧುಗಳ ಕುಟುಂಬಗಳಿಗೆ ಹಿಂದಿರುಗಿಸಲಾಗಿದೆ.
ಕಳೆದ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಲಾಟೆಹಾರ್ ಎಂಬಲ್ಲಿನ ಪೊಖರಿ ಗ್ರಾಮದ ನಿವಾಸಿ ಹಾಜಿ ಅಲಿ ಮುಮ್ತಾಝ್ ಅವರು ವರದಕ್ಷಿಣೆ ವಿರೋಧಿ ಅಭಿಯಾನವನ್ನು ಆರಂಭಿಸಿದ್ದೇ ಈ ಎಲ್ಲಾ ಬೆಳವಣಿಗೆಗಳಿಗೆ ನಾಂದಿಯಾಗಿದೆ. ಅವರು ತೋರಿಸಿದ ಹಾದಿಯಂತೆಯೇ ಸಮುದಾಯದ ಹಿರಿಯರು ನೂರಾರು ಬಡ ಕುಟುಂಬಗಳಿಗೆ ದೊಡ್ಡ ಹೊಡೆತವನ್ನೇ ನೀಡಿದ ಈ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಲು ನಿರ್ಧರಿಸಿದ್ದರು.
ವರದಕ್ಷಿಣೆ ಬೇಡಿಕೆಯಿಟ್ಟರೆ ಅಥವಾ ಪಡೆದುಕೊಂಡಿದ್ದೇ ಆದಲ್ಲಿ ಅಂತಹಾ ’ನಿಖಾಹ್’ ನಡೆಸದೇ ಇರಲು ಮೌಲ್ವಿಗಳು ಕೂಡ ನಿರ್ಧರಿಸಿದ್ದರು.
‘‘ವರದಕ್ಷಿಣೆಯ ಪಿಡುಗಿನ ವಿರುದ್ಧದ ನಮ್ಮ ಅಭಿಯಾನ ಅಭೂತಪೂರ್ವ ಯಶಸ್ಸು ಕಂಡಿದೆ. ಇನ್ನೂ ಕೆಲವು ಕುಟುಂಬಗಳು ವರದಕ್ಷಿಣೆ ಪದ್ಧತಿಯ ವಿರುದ್ಧ ಕಟಿಬದ್ಧವಾಗಬೇಕಿದೆ. ಇದಕ್ಕಾಗಿ ಮುಂದಿನ ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಿಂದೆ ಮುಸ್ಲಿಮ್ ಸಮುದಾಯದಲ್ಲಿ ವರದಕ್ಷಿಣೆ ಸಮಸ್ಯೆಯಿಲ್ಲದೇ ಇದ್ದರೂ ಇತ್ತೀಚಿಗೆ ಪ್ರತಿಯೊಂದು ವಿವಾಹದ ಸಂದರ್ಭ ವರದಕ್ಷಿಣೆ ಪಡೆಯಲಾಗುತ್ತಿತ್ತು. ಈಗ ಹೆಚ್ಚಿನ ವಿವಾಹ ವರದಕ್ಷಿಣೆ ಪಡೆಯದೆಯೇ ನಡೆಯುತ್ತಿದೆ’’ ಎಂದು ದಲ್ತೋಗಂಜ್ ನಲ್ಲಿ ಮಾರ್ಚ್ 7ರಂದು ನಡೆಯಲಿರುವ ಬೃಹತ್ ಸಾಮೂಹಿಕ ವಿವಾಹ ಸಮಾರಂಭದ ಸಿದ್ಧತೆಯಲ್ಲಿರುವ ಮುಮ್ತಾಝ್ ಅಲಿ ಹೇಳಿದ್ದಾರೆ.
‘‘ನಾನು ಹಿಂದೆ ತಪ್ಪು ಮಾಡಿದ್ದೆ. ಅದನ್ನು ಸರಿಪಡಿಸಲು ನಾನು ವರದಕ್ಷಿಣೆಯನ್ನು ವಾಪಸ್ ನೀಡಿದ್ದೇನೆ. ಮುಂದೆಯೂ ನಾನು ವರದಕ್ಷಿಣೆ ಬೇಡಿಕೆಯಿಡುವುದಿಲ್ಲ’’ ಎಂದು ವರದಕ್ಷಿಣೆ ಹಿಂದಕ್ಕೆ ನೀಡಿದವರಲ್ಲೊಬ್ಬರಾದ ಸಲೀಂ ಅನ್ಸಾರಿ ಹೇಳುತ್ತಾರೆ.