2016ರಲ್ಲಿ ಕೇರಳದಿಂದ 662, ಕರ್ನಾಟಕದಿಂದ 2918 ಮಕ್ಕಳು ನಾಪತ್ತೆ!

ಕೊಚ್ಚಿ,ಮಾ.2: 2016ರಲ್ಲಿ ಕೇರಳದಿಂದ 662 ಮಕ್ಕಳು ನಾಪತ್ತೆಯಾಗಿವೆ ಎಂದು ರಾಷ್ಟ್ರೀಯ ಮಹಿಳಾ, ಮಕ್ಕಳ ಕಲ್ಯಾಣ ಸಚಿವಾಲಯದ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟವಾಗಿದೆ. ನಾಪತ್ತೆಯಾದವರಲ್ಲಿ ಹೆಚ್ಚಿನವರು ಹೆಣ್ಣುಮಕ್ಕಳಾಗಿದ್ದಾರೆ.
ಕೇರಳದಲ್ಲಿ 2016ರಲ್ಲಿ 340 ಮಕ್ಕಳನ್ನು ಪೊಲೀಸರು ಪತ್ತೆಹಚ್ಚಿ ಅವರ ತಂದೆ ತಾಯಿಗಳಿಗೆ ಒಪ್ಪಿಸಿದ್ದಾರೆ. 2017 ಜನವರಿ,ಫೆಬ್ರವರಿ ಈ ಎರಡು ತಿಂಗಳಲ್ಲಿ ಕೇರಳದಿಂದ 4ರಿಂದ 18ವರ್ಷದವರೆಗಿನ ವಯೋಮಿತಿಯ 15 ಮಕ್ಕಳು ಕಾಣೆಯಾಗಿದ್ದಾರೆ. ಇವರಲ್ಲಿ ಎಂಟು ಮಂದಿ ಹೆಣ್ಣುಮಕ್ಕಳಿದ್ದಾರೆ.
ಕರ್ನಾಟಕದಿಂದ ಕಳೆದ ವರ್ಷ 2918 ಮಕ್ಕಳು, ತಮಿಳ್ನಾಡಿನಿಂದ 1873 ಮಕ್ಕಳು ಕಾಣೆಯಾಗಿದ್ದಾರೆ. ಕಳೆದ ಮೂವತ್ತು ದಿವಸಗಳಲ್ಲಿ ತಮಿಳ್ನಾಡಿನಿಂದ 273 ಮಕ್ಕಳು ಕಾಣೆಯಾಗಿದ್ದಾರೆ.
ಮಹಾರಾಷ್ಟ್ರದಿಂದ 1529 ಮಕ್ಕಳು, ಪಶ್ಚಿಮಬಂಗಾಳದಿಂದ 6563 ಮಕ್ಕಳು, ದಿಲ್ಲಿಯಿಂದ 5563 ಮಕ್ಕಳು 2016ರಲ್ಲಿ ಕಾಣೆಯಾಗಿದ್ದಾರೆಂದು ವರದಿ ತಿಳಿಸಿದೆ.ಕೇರಳದಲ್ಲಿಜನವರಿ,ಫೆಬ್ರವರಿ ತಿಂಗಳಲ್ಲಿ ಒಟ್ಟು 30 ಮಕ್ಕಳು ನಾಪತ್ತೆಯಾಗಿದ್ದರು. ಇವರಲ್ಲಿ 15 ಮಂದಿಯನ್ನು ಪತ್ತೆ ಹಚ್ಚಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಎರಡು ತಿಂಗಳಲ್ಲಿ ಎಂಟು ಹೆಣ್ಣುಮಕ್ಕಳು ಕೇರಳದಿಂದ ಕಾಣೆಯಾಗಿದ್ದು, ಅವರಿಗೆ ಹದಿನೆಂಟು ವರ್ಷ ಪೂರ್ತಿಯಾಗಿಲ್ಲ. ಇತ್ತೀಚೆಗೆ ವೆಂಗರದಿಂದ ತಾಯಿಯೊಂದಿಗೆ ಮೂರು ಮಕ್ಕಳು ನಾಪತ್ತೆಯಾಗಿದ್ದರು. ಈ ಮಕ್ಕಳ ಫೋಟೊಗಳು ಮತ್ತು ವಿವರಗಳು ಕಾಣೆಯಾದವರ ಪಟ್ಟಿಯಲ್ಲಿ ವೆಬ್‌ಸೈಟ್‌ನಲ್ಲಿ ದಾಖಲಾಗಿದೆ.
ಪತಿಯೊಂದಿಗೆ ಜಗಳ ಮಾಡಿ ಮನೆಬಿಟ್ಟಿದ್ದ ಮಹಿಳೆ ಮತ್ತು ಮೂವರು ಮಕ್ಕಳನ್ನು ಪೊಲೀಸರು ನಂತರ ಪತ್ತೆಹಚ್ಚಿದ್ದರು. ವೆಬ್‌ಸೈಟ್‌ನಲ್ಲಿ ಕಾಣೆಯಾದ ಮಕ್ಕಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಲಾಗಿಲ್ಲ. ಹೆಚ್ಚಿನ ಪ್ರೋಫೈಲುಗಳಲ್ಲಿ ತಂದೆತಾಯಿಯರ ವಿವರವೂ ಸರಿಯಾಗಿಲ್ಲ. ವಿಳಾಸವೂ ಇಲ್ಲ. ಮಲಪ್ಪುರಂ, ತಿರುವನಂತಪುರಂ,ಇಡುಕ್ಕಿ, ಕಣ್ಣೂರ್ ಜಿಲ್ಲೆಗಳಿಂದ ಮಕ್ಕಳು ಕಾಣೆಯಾಗಿವೆ.
ಕಲ್ಲಿಕೋಟೆ ವೆಳ್ಳಿಮಾಡುಕುನ್ನುಚಿಲ್ಡ್ರನ್ಸ್ ಹೋಮ್‌ನಿಂದ ಇಬ್ಬರು ಮಕ್ಕಳು ಕಾಣೆಯಾಗಿದ್ದಾರೆ. ಕಾಣೆಯಾದ ಗಂಡುಮಕ್ಕಳಲ್ಲಿ ಹೆಚ್ಚಿನವರನ್ನು ಪತ್ತೆಹಚ್ಚಲಾಗಿದ್ದರೂ ಹೆಣ್ಣುಮಕ್ಕಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಮಕ್ಕಳ ನಾಪತ್ತೆ ಪ್ರಕರಣಗಳನ್ನು ತನಿಖೆ ನಡೆಸುವ ಹೊಣೆ ಪೊಲೀಸರದ್ದಾಗಿದೆ. ಆದರೆ ಚೈಲ್ಡ್‌ಲೈನ್ ಎರ್ನಾಕುಳಂ ಜಿಲ್ಲಾ ನಿರ್ದೇಶಕ ಫಾ.ಟೋಮಿ ಕೇರಳದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಹೇಳಿದ್ದಾರೆಎಂದು ವರದಿಯಾಗಿದೆ.