ಬೇಡಿಕೆಗಳ ಈಡೇರಿಕೆಗಾಗಿ ಯುವ ವೈದ್ಯರಿಂದ ರಾಜ್ಯವ್ಯಾಪಿ ಚಳವಳಿ

ಮಂಗಳೂರು, ಮಾ.2: ರಾಜ್ಯದ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದು, ವೈದ್ಯಕೀಯ ಶಿಕ್ಷಣ ವೆಚ್ಚಕ್ಕೆ ಕಡಿವಾಣ ಹಾಕುವುದು ಹಾಗೂ ಶಿಕ್ಷಣದ ಗುಣಮಟ್ಟವನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯದ ಕಿರಿಯ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಭಾರತೀಯ ವೈದ್ಯಕೀಯ ಸಂಘದ ಯುವ ವೈದ್ಯರ ಘಟಕದಡಿ ಭ್ರಷ್ಟಾಚಾರ ವಿರೋಧಿ ವೈದ್ಯರು ಎಂಬ ಸಂಯೋಜನಾ ಸಮಿತಿಯನ್ನು ರಚಿಸಿಕೊಂಡು ರಾಜ್ಯವ್ಯಾಪಿ ಚಳವಳಿಗೆ ಮುಂದಾಗಿದ್ದಾರೆ.
ತಮ್ಮ ಚಳವಳಿಯ ಭಾಗವಾಗಿ ಈಗಾಗಲೇ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿ 5000ಕ್ಕೂ ಅಧಿಕ ಸಹಿಗಳನ್ನು ಸಂಗ್ರಹಿಸಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಸೇರಿದಂತೆ ಸಂಬಂಧ ಪಟ್ಟ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಿಗೆ ಇ ಮೇಲ್ ಕಳುಹಿಸುವ ಅಭಿಯಾನ ಆರಂಭಿಸಿರುವುದಾಗಿ ಸಂಯೋಜನಾ ಸಮಿತಿಯ ಮಂಗಳೂರು ಘಟಕದ ಯುವ ವೈದ್ಯೆ ಡಾ. ವಿಶ್ರಾಂಖ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾ.4ರಂದು ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಎದುರು ಯುವ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ. ಮಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿಯೂ ಯುವ ವೈದ್ಯರು ಪ್ರತಿಭಟನಾ ಸೂಚಕವಾಗಿ ಅಂದು ಕಪ್ಪು ಪಟ್ಟಿ ಧರಿಸಿ ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿರೋಧವನ್ನು ವ್ಯಕ್ತಪಡಿಸಲಿದ್ದಾರೆ ಎಂದವರು ಹೇಳಿದರು.
ದಾಖಲೆ ಪರಿಶೀಲನಾ ಪ್ರಕ್ರಿಯೆ ಬಗ್ಗೆ ವಿವರನ್ನು ಎಲ್ಲಾ ವಾರ್ತಾ ಪತ್ರಿಕೆಗಳಲ್ಲಿ ಪ್ರಕಟಿಸಬೇಕು ಹಾಗೂ ವೇಳಾಪಟ್ಟಿಯನ್ನು ಬದಲಿಸಿ ಕಾಲಾವಕಾಶ ನೀಡಬೇಕು. ರಾಜ್ಯದ ಎಲ್ಲಾ ಸರಕಾರಿ, ಖಾಸಗಿ ಹಾಗೂ ಪರಿಗಣಿತ ವಿಶ್ವವಿದ್ಯಾಲಯಗಳಲ್ಲಿರುವ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗದ ಎಲ್ಲಾ ಎಂಡಿ, ಎಂಎಸ್, ಡಿಪ್ಲೊಮಾ, ಎಂಡಿಎಸ್ ಹಾಗೂ ಎಂಬಿಬಿಎಸ್, ಬಿಡಿಎಸ್ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಆಯೋಗದ ಮೂಲಕ ಪಾರದರ್ಶಕವಾಗಿ ಏಕಕಿಂಡಿಯಿಂದ ಹಂಚಿಕೆ ಮಾಡಬೇಕು. ರಾಜ್ಯದಲ್ಲಿ ಎಂಬಿಬಿಎಸ್, ಬಿಡಿಎಸ್ ಒದಿರುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಸರಕಾರಿ ಕೋಟಾದ ಸೀಟುಗಳನ್ನು ಪಡೆಯುವ ಅರ್ಹತೆಯನ್ನು ಹಿಂಪಡೆಯಬೇಕು. ರಾಜ್ಯದ ಎಲ್ಲಾ ಖಾಸಗಿ ಹಾಗೂ ಪರಿಗಣಿತ ವಿವಿಗಳಲ್ಲಿರುವ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗದ ಎಲ್ಲಾ ವಿಶೇಷತೆಗಳಲ್ಲಿ ಎಂಡಿ, ಎಂಎಸ್, ಡಿಪ್ಲೊಮಾ, ಎಂಡಿಎಸ್ ಸೀಟುಗಳಲ್ಲಿ ಹಾಗೂ ಎಂಬಿಬಿಎಸ್ ಬಿಡಿಎಸ್ ಸೀಟುಗಳಲ್ಲಿ ಶೇ. 70ರಷ್ಟನ್ನು ಸರಕಾರಿ ಸ್ವಾಮ್ಯಕ್ಕೆ ನೀಡಬೇಕು ಸೇರಿದಂತೆ ಇತರ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ತಾವು ಧರಣಿ ನಡೆಸುತ್ತಿರುವುದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯುವ ವೈದ್ಯರ ಪರವಾಗಿ ಡಾ.ಅಭಿಷೇಕ್ ಕೃಷ್ಣ, ಪೋಷಕರ ಪರವಾಗಿ ಸೇತು ಮಾಧವನ್ ಹಾಗೂ ಎಜೆ ಆಸ್ಪತ್ರೆಯ ಡಾ.ಮುಕುಂದ್ ಉಪಸ್ಥಿತರಿದ್ದರು.