ಮಾಜಿ ಸಚಿವರ ಕಡಗಣನೆಯ ಆರೋಪ: ಕಾಂಗ್ರೆಸ್‌ಗೆ ಸಾಮೂಹಿಕ ರಾಜೀನಾಮೆ
ಸೊರಬ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕರ್ತರ ಆಕ್ರೋಶ

ಸೊರಬ,ಮಾ.2: ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಕಡೆಗಣನೆ ಹಾಗೂ ಹಿರಿಯ ನಾಯಕರ ಅನಾದರಣೆ ಮನೋಭಾವವನ್ನು ವಿರೋಧಿಸಿ ಸೊರಬ ಹಾಗೂ ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ರಾಜೀನಾಮೆ ಸಲ್ಲಿಸಿ ಮಾತನಾಡಿದ ಸೊರಬ ಬ್ಲಾಕ್ ಅಧ್ಯಕ್ಷ ಎಂ.ಡಿ.ಉಮೇಶ್, ತಾಲೂಕಿನಲ್ಲಿ ಕುಮಾರ್ ಬಂಗಾರಪ್ಪಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಗೊಂಡಿದ್ದರೂ ವಿರೋಧ ಪಕ್ಷದ ಹಾಗೂ ಹಾಲಿ ಶಾಸಕರನ್ನು ಸಚಿವ ಕಾಗೋಡು ತಿಮ್ಮಪ್ಪ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ. ಆದರೆ ಕುಮಾರ್ ಬಂಗಾರಪ್ಪಅವರನ್ನು ಅಲಕ್ಷಿಸುತ್ತಿದ್ದಾರೆ. ಬಗರ್ ಹುಕುಂ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವಾಗಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಜೆಡಿಎಸ್ ಪಕ್ಷದವರನ್ನು ನೇಮಕ ಮಾಡಿ ಕುಮಾರ್ ಬಂಗಾರಪ್ಪಅವರ ತೇಜೋವಧೆ ಮಾಡಿ ಅವರನ್ನು ಮೂಲಕ ರಾಜಕಾರಣದಿಂದಲೇ ಮುಗಿಸುವ ಹುನ್ನಾರ ನಡೆಸಿದ್ದಾರೆ. ಕುಮಾರ್ ಬಂಗಾರಪ್ಪನವರ ಅಶ್ವಮೇಧ ಕುದುರೆ ಕತ್ತೆಯಾಗಿದೆ ಎಂದು ಗೇಲಿ ಮಾಡುತ್ತಿದ್ದ, ಶಾಸಕ ಮಧು ಬಂಗಾರಪ್ಪ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಪಕ್ಷದ ಬಾಗಿಲು ತಟ್ಟುತ್ತಿರುವುದು ಕತ್ತೆ ಬಾಲ ಹಿಡಿಯಲು ಹೊರಟಿರುವುದಕ್ಕೆ ಸಾಕ್ಷಿಯಾಗಿದೆ. ನಾವೆಲ್ಲಾ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಕುಮಾರ್ ಬಂಗಾರಪ್ಪಅವರರ ರಾಜಕೀಯ ಭವಿಷ್ಯಕ್ಕೆ ಬೆಂಬಲವಾಗಿ ನಿಲ್ಲಲಿದ್ದೇವೆ ಎಂದರು.
ಆನವಟ್ಟಿ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ವೃತ್ತಿಕೊಪ್ಪ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಬಿಟ್ಟು, ಹಿರಿಯ ಸಚಿವರು ಜೆಡಿಎಸ್‌ನವರನ್ನು ಓಲೈಸುವುದರಲ್ಲಿ ಮಗ್ನರಾಗಿದ್ದಾರೆ. ಆ ಮೂಲಕ ಪಕ್ಷವನ್ನೆ ನಿರ್ನಾಮ ಮಾಡಲು ಅವರು ಹೊರಟಿದ್ದಾರೆ. ಈ ಬಗ್ಗೆ ಹಲವು ಬಾರಿ ಡಿಸಿಸಿ ಹಾಗೂ ಕೆಪಿಸಿಸಿಯವರ ಗಮನಕ್ಕೆ ತಂದರೂ ಅವರು ಕೂಡ ಯಾವುದೆ ಕ್ರಮ ಕೈಗೊಳ್ಳದಿರುವುದರಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ. ಕುಮಾರ್ ಬಂಗಾರಪ್ಪತೆಗೆದುಕೊಳ್ಳುವ ಎಲ್ಲಾ ರಾಜಕೀಯ ತೀರ್ಮಾನಕ್ಕೆ ನಾವು ಬದ್ಧ ಎಂದು ಹೇಳಿದರು.
ಸಭೆೆಯಲ್ಲಿ ತಾ.ಪಂ. ಸದಸ್ಯ ಹನುಮಂತಪ್ಪ, ಜಿ.ಪಂ. ಮಾಜಿ ಸದಸ್ಯ ಪಿ.ಎಸ್.ಪ್ರಶಾಂತ್, ತಬಲಿ ಬಂಗಾರಪ್ಪ, ಮಹೇಶ್ ಮೂಡಿ, ಯೂಸುಫ್ ಸಾಬ್, ಶಬ್ಬೀರ್ ಸಾಬ್ ಖಿಲ್ಲೇದಾರ್, ಸೈಯದ್ ನಝೀರ್, ಇಬ್ರಾಹೀಂ ಮೂಡಿ, ಮಂಜುಳಾ, ಪರಮೇಶ್ವರಪ್ಪ ಕಮನವಳ್ಳಿ, ನಿಂಗಪ್ಪಗುಂಡಶಟ್ಟಿಕೊಪ್ಪ, ಕಲ್ಲಪ್ಪಚಿತ್ರಟ್ಟೆಹಳ್ಳಿ, ಟಿ.ಆರ್.ಸುರೇಶ್, ಬುಳ್ಳಿ ವಿನಾಯಕಪ್ಪ, ಬಸವರಾಜ, ಗಣಪತಿ ಕುಳುಗ, ಆನಂದಪ್ಪಕುಪ್ಪಗಡ್ಡೆ, ಮಂಜಪ್ಪಮಾಸ್ತರ್, ಹಸೀನಾ ಮತ್ತಿತರರು ಉಪಸ್ಥಿತರಿದ್ದರು.







