ಒಡಹುಟ್ಟಿದ ತಮ್ಮನಿಂದಲೇ ಅಕ್ಕನ ಕೊಲೆ

ದಾವಣಗೆರೆ, ಮಾ.2: ಹೊಲ ಮಾರಾಟ ಮಾಡಲು ಒಪ್ಪಿಗೆ ನೀಡದ ಅಕ್ಕನ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ತಮ್ಮನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಕೊಡಗನೂರು ಸಮೀಪದ ಬೊಮ್ಮೆನಹಳ್ಳಿಯಲ್ಲಿ ನಡೆದಿದೆ.
ಬೊಮ್ಮೆನಳ್ಳಿಯ ಶಾಂತಿಬಾಯಿ (60) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಶಾಂತಿಬಾಯಿ ಮತ್ತು ಗಣೇಶ್ ನಾಯ್ಕ ಒಡಹುಟ್ಟಿದವರು. ಇಬ್ಬರು ಜೀವನ ನಡೆಸಲು ಇದ್ದ ಎರಡು ಎಕರೆ ಜಮೀನನ್ನು ಮಾರಾಟ ಮಾಡುವ ವಿಚಾರದಲ್ಲಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಅಕ್ಕ ಶಾಂತಿಬಾಯಿ ಜಮೀನು ಮಾರಾಟ ಮಾಡಲು ಅಡ್ಡಪಡಿಸಿದ್ದಲ್ಲದೇ ಮಾರಾಟ ಪತ್ರಕ್ಕೆ ತಾನು ಸಹಿ ಹಾಕುವುದಿಲ್ಲ ಎಂದಿದ್ದರು.
ಇದರಿಂದ ಸಿಟ್ಟಿಗೆದ್ದ ಗಣೇಶ್ ನಾಯ್ಕ, ಕಳೆದ ಎರಡು ದಿನಗಳ ಹಿಂದೆ ಅಕ್ಕ ಶಾಂತಿಬಾಯಿಯ ತಲೆಗೆ ಕಬ್ಬಿಣದ ರಾಡಿನಿಂದ ಬಲವಾಗಿ ಹಲ್ಲೆ ಮಾಡಿದ್ದ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶಾಂತಿಬಾಯಿ ಬುಧವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಆರೋಪಿ ಗಣೇಶ್ ನಾಯ್ಕನನ್ನು ಬಂಧಿಸಲಾಗಿದೆ.





