ತ.ನಾ:ತಾಮಿರಭರಣಿ ನದಿ ನೀರು ಬಳಕೆಗೆ ಕೋಕ್,ಪೆಪ್ಸಿಗೆ ಹೈಕೋರ್ಟ್ ಅವಕಾಶ
ಚೆನ್ನೈ,ಮಾ.2: ಕೋಕಾಕೋಲಾ ಮತ್ತು ಪೆಪ್ಸಿ ತಿರುನೆಲ್ವೆಲಿ ಜಿಲ್ಲೆಯ ತಾಮಿರಭರಣಿ ನದಿಯ ನೀರನ್ನು ಬಳಸುವುದನ್ನು ನಿಷೇಧಿಸುವುದಿಲ್ಲ ಎಂದು ಮದ್ರಾಸ ಉಚ್ಚ ನ್ಯಾಯಾ ಲಯವು ಗುರುವಾರ ತಿಳಿಸಿತು. ನಾಲ್ಕು ತಿಂಗಳ ಹಿಂದೆ ಪ್ರತಿಭಟನೆಗಳ ನಡುವೆ ಇವೆರಡು ಕಂಪನಿಗಳು ನದಿಯ ನೀರನ್ನು ಬಳಸುವುದನ್ನು ನಿರ್ಬಂಧಿಸಲಾಗಿತ್ತು.
ನದಿಯು ಎರಡು ಜಿಲ್ಲೆಗಳಿಗೆ ಕುಡಿಯಲು ಮತ್ತು ನೀರಾವರಿಗೆ ನೀರನ್ನು ಒದಗಿಸುತ್ತದೆ. ಪೆಪ್ಸಿ ಮತ್ತು ಕೋಕ್ ತಮ್ಮ ವಾಣಿಜ್ಯಿಕ ಲಾಭಕ್ಕಾಗಿ ನದಿ ನೀರನ್ನು ಬಳಸುತ್ತಿರುವುದರಿಂದ ಸಾವಿರಾರು ಕೃಷಿಕರು ತೊಂದರೆಗೀಡಾಗಿದ್ದಾರೆ ಎಂದು ಅರ್ಜಿದಾರ ಡಿ.ಎ.ಪ್ರಭಾಕರ್ ವಾದಿಸಿದ್ದರು. ಆದರೆ ತಾವು ನದಿಯಲ್ಲಿನ ಹೆಚ್ಚುವರಿ ನೀರನ್ನು ಮಾತ್ರ ಬಳಸಿಕೊಳ್ಳುತ್ತಿ ರುವುದಾಗಿ ಕಂಪನಿಗಳು ಹೇಳಿದ್ದವು.
2015ರಲ್ಲಿ ಕಂಪನಿಗಳಿಂದ ನದಿ ನೀರಿನ ಬಳಕೆಯನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆಗಳ ಸಂದರ್ಭ ಘರ್ಷಣೆಗಳಲ್ಲಿ ಹಲವಾರು ಜನರು ಗಾಯಗೊಂಡಿದ್ದರು.
2005ರಲ್ಲಿ ತಮಿಳುನಾಡು ಸರಕಾರವು ನದಿಯಿಂದ ಪ್ರತಿದಿನ ಒಂಭತ್ತು ಲಕ್ಷ ನೀರನ್ನು ಬಳಸಿಕೊಳ್ಳಲು ಈ ಕಂಪನಿಗಳಿಗೆ ಅನುಮತಿ ನೀಡಿದ್ದು, ಬಳಿಕ ಈ ಪ್ರಮಾಣವನ್ನು ಇಮ್ಮಡಿಗೊಳಿಸಿತ್ತು. ಕಂಪನಿಗಳಿಗೆ ಪ್ರತಿ ಸಾವಿರ ಲೀ.ನೀರಿಗೆ ಕೇವಲ 37.50 ರೂ ಶುಲ್ಕ ವಿಧಿಸಲಾಗುತ್ತಿದೆ ಎನ್ನುವುದನ್ನು ಪ್ರಭಾಕರ್ ನ್ಯಾಯಾಲಯದ ಗಮನಕ್ಕೆ ತಂದಿದ್ದರು.