ಬಂದ್ ವೇಳೆ ಬಸ್ಸಿಗೆ ಕಲ್ಲು ತೂರಾಟ: ಇಬ್ಬರು ಆರೋಪಿಗಳ ಬಂಧನ; 2ವಾಹನಗಳು ವಶಕ್ಕೆ

ಪುತ್ತೂರು: ಕೇರಳದ ಮುಖ್ಯಮಂತ್ರಿಗಳ ದ.ಕ.ಜಿಲ್ಲಾ ಭೇಟಿಯನ್ನು ವಿರೋಧಿಸಿ ಫೆ.25ರಂದು ಸಂಘ ಪರಿವಾರ ನಡೆಸಿದ ಜಿಲ್ಲಾ ಬಂದ್ ವೇಳೆಯಲ್ಲಿ ಕೆಸ್ಸಾರ್ಟಿಸಿ ಬಸ್ಸಿಗೆ ಕಲ್ಲು ಎಸೆದು ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಒಳಕುಡ್ಯ ನಿವಾಸಿ ದೇವರಾಜ್ ಎಂಬವರ ಪುತ್ರ ಪುನೀತ್(20) ಮತ್ತು ಕುರಿಯ ಗ್ರಾಮದ ಕೈಂತಿಲ ನಿವಾಸಿ ಬಾಬು ಗೌಡ ಎಂಬವರ ಪುತ್ರ ಹರ್ಷಿತ್ ಕೆ(19) ಬಂಧಿತ ಆರೋಪಿಗಳು.
ಬಂದ್ ವೇಳೆಯಲ್ಲಿ ತಾಲೂಕಿನ ಬೆದ್ರಾಳ, ಬಸ್ಸು ನಿಲ್ದಾಣದ ಬಳಿ ಮತ್ತು ಕೃಷ್ಣ ನಗರದಲ್ಲಿ ಕೆಸ್ಸಾರ್ಟಿಸಿ ಬಸ್ಸಿಗೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ನಗರ ಠಾಣೆಯಲ್ಲಿ ಮೂರು ಪ್ಯತ್ಯೇಕ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಹಾಗೂ ಕೃತ್ಯಕ್ಕೆ ಬಳಸಿದರೆನ್ನಲಾದ ಬೈಕ್ ಮತ್ತು ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.







