ಸುಳ್ಯ: 'ಮಾತಿನ ಮಹಾಕಾವ್ಯ- ನೀಲಗಾರರ ಸಾಲು' ಸಾಕ್ಷ್ಯಚಿತ್ರ ಬಿಡುಗಡೆ

ಸುಳ್ಯ, ಮಾ.2: ಜಾನಪದ ಸಂಶೋಧಕ ಡಾ.ಸುಂದರ ಕೇನಾಜೆಯವರ ಚಿತ್ರಕತೆ ಮತ್ತು ನಿರ್ದೇಶನದ 'ಮಾತಿನ ಮಹಾಕಾವ್ಯ- ನೀಲಗಾರರ ಸಾಲು' ಎಂಬ ಸಾಕ್ಷ್ಯಚಿತ್ರ ಇತ್ತೀಚೆಗೆ ಮೈಸೂರಿನಲ್ಲಿ ಬಿಡುಗಡೆಯಾಯಿತು.
ಜನಪದ ವೃತ್ತಿ ಗಾಯಕ ಪರಂಪರೆಯ ನೀಲಗಾರರ ಕುರಿತಾಗಿ ರಚಿಸಿದ ಈ ಸಾಕ್ಷ್ಯಚಿತ್ರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ ಸಿದ್ಧರಾಮಯ್ಯ ಬಿಡುಗಡೆಗೊಳಿಸಿ, ನೀಲಗಾರರ ಸಮಗ್ರ ಬದುಕನ್ನು ಈ ರೀತಿ ದಾಖಲಿಸಿರುವ ಕಾರ್ಯ ಉತ್ತಮವಾದುದು ಮತ್ತು ಜಾನಪದ ಕ್ಷೇತ್ರದಲ್ಲಿ ಇಂತಹಾ ಕೆಲಸಗಳು ಇನ್ನೂ ಹೆಚ್ಚುಹೆಚ್ಚಾಗಿ ನಡೆಯಬೇಕಾದ ಅಗತ್ಯ ಇದೆಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಜಾನಪದ ವಿದ್ವಾಂಸರಾದ ಡಾ. ಹನೂರು ಕೃಷ್ಣಮೂರ್ತಿ, ಡಾ. ಹಿ.ಶಿ.ರಾಮಚಂದ್ರೇ ಗೌಡ, ಪ್ರೊ. ಗೋವಿಂದಯ್ಯ, ಹಿರಿಯ ನೀಲಗಾರ ಕಲಾವಿದರಾದ ಮಳವಳ್ಳಿ ಮಹದೇವ ಸ್ವಾಮಿ, ಮೈಸೂರು ಗುರುರಾಜ್ ಮಾತನಾಡಿದರು.
ನಿರ್ದೇಶಕ ಡಾ.ಸುಂದರ ಕೇನಾಜೆ, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಮುಖ್ಯಸ್ಥ ಹಾಗೂ ಸಾಕ್ಷ್ಯಚಿತ್ರದ ನಿರ್ಮಾಣ ನಿರ್ವಹಣೆಯ ಡಾ. ಎಂ.ಸಿ ಮನೋಹರ್, ಕಲಾವಿದ ಬರ್ಟಿ ಒಲಿವೆರಾ, ಪತ್ರಕರ್ತ ಮುಳ್ಳೂರು ರಾಜು, ಸಾಕ್ಷ್ಯಚಿತ್ರ ತಂಡದ ಬಾಬುಪ್ರಸಾದ್, ಕನ್ನಡಿ ಕ್ರಿಯೇಷನ್‌ನ ಗುರುಪ್ರಸಾದ್ ಹಾಗೂ ರಂಜಿತ್ ಸೇತು ಉಪಸ್ಥಿತರಿದ್ದರು.







