2 ಬಾರಿ ರಶ್ಯ ರಾಯಭಾರಿಯನ್ನು ಭೇಟಿಯಾಗಿದ್ದ ಟ್ರಂಪ್‌ರ ಅಟಾರ್ನಿ : ‘ವಾಶಿಂಗ್ಟನ್ ಪೋಸ್ಟ್’ ವರದಿ
ಆದರೆ, ಅಟಾರ್ನಿ ಸೆನೆಟ್ ವಿಚಾರಣೆಯಲ್ಲಿ ಸುಳ್ಳು ಹೇಳಿದ್ದರು!

ವಾಶಿಂಗ್ಟನ್, ಮಾ. 2: ಅಮೆರಿಕದ ಅಟಾರ್ನಿ ಜನರಲ್ ಜೆಫ್ ಸೆಶನ್ಸ್ ಕಳೆದ ವರ್ಷ ಎರಡು ಬಾರಿ ಅಮೆರಿಕಕ್ಕೆ ರಶ್ಯದ ರಾಯಭಾರಿಯನ್ನು ಭೇಟಿಯಾಗಿದ್ದರು ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಆದರೆ, ಜನವರಿಯಲ್ಲಿ ಸೆನೆಟ್ ನಡೆಸಿದ್ದ ವಿಚಾರಣೆಯ ವೇಳೆ, ಸೆಶನ್ಸ್ ಇದಕ್ಕೆ ವಿರುದ್ದವಾದ ಹೇಳಿಕೆಗಳನ್ನು ನೀಡಿದ್ದರು. ಹಾಗಾಗಿ, ಪತ್ರಿಕೆಯ ಈ ವರದಿಯ ಹಿನ್ನೆಲೆಯಲ್ಲಿ ಅವರು ವಿವಾದಕ್ಕೆ ಸಿಲುಕುವ ಸಾಧ್ಯತೆಗಳು ವಿಪುಲವಾಗಿವೆ.
ಹೊಸ ಮಾಹಿತಿಯ ಬಳಿಕ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಡಳಿತದ ಮೇಲೆ ಹೊಸದಾಗಿ ಸಂದೇಹದ ಮೋಡಗಳು ಹಬ್ಬಿವೆ. ಅಧ್ಯಕ್ಷೀಯ ಚುನಾವಣೆಯ ಅವಧಿಯಲ್ಲಿ ರಿಪಬ್ಲಿಕನ್ ಪಕ್ಷದ ಚುನಾವಣಾ ಪ್ರಚಾರ ತಂಡ ಮತ್ತು ರಶ್ಯದ ನಡುವೆ ಯಾವುದೇ ಸಂಶಯಾಸ್ಪದ ಸಂಪರ್ಕಗಳು ಇರಲಿಲ್ಲ ಎಂಬುದಾಗಿ ಟ್ರಂಪ್ ತಂಡ ಪದೇ ಪದೇ ಹೇಳಿತ್ತು.
ಚುನಾವಣೆಯ ವೇಳೆ ರಶ್ಯವು ಟ್ರಂಪ್ ಪರವಾಗಿ ಮತ್ತು ಅವರ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ವಿರುದ್ಧವಾಗಿ ಕೆಲಸ ಮಾಡಿತ್ತು ಎಂಬುದಾಗಿ ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ.
ವರದಿಗೆ ತಕ್ಷಣ ಪ್ರತಿಕ್ರಿಯಿಸಿರುವ ಶ್ವೇತಭವನ, ಇದು ಪಕ್ಷಪಾತಪೂರಿತ ಡೆಮಾಕ್ರಟ್‌ಗಳು ನಡೆಸಿದ ದಾಳಿ ಎಂದು ಬಣ್ಣಿಸಿದೆ. ಸೆಶನ್ಸ್ ರಶ್ಯದ ಅಧಿಕಾರಿಗಳನ್ನು ಭೇಟಿ ಮಾಡಿರುವುದನ್ನು ಅದು ಖಚಿತಪಡಿಸಿದೆಯಾದರೂ, ಅವರು ಯಾವುದೇ ತಪ್ಪು ಮಾಡಿಲ್ಲ ಎಂದಿದೆ.
‘‘ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ನಾನು ರಶ್ಯದ ಅಧಿಕಾರಿಗಳನ್ನು ಯಾವತ್ತೂ ಭೇಟಿ ಮಾಡಿಲ್ಲ. ಈ ಆರೋಪ ಯಾಕೆ ಎನ್ನುವುದು ನನಗೆ ತಿಳಿದಿಲ್ಲ. ಅದು ತಪ್ಪು’’ ಎಂದು ಹೇಳಿಕೆಯೊಂದರಲ್ಲಿ ಸೆಶನ್ಸ್ ಹೇಳಿದರು.
ಆದರೆ, ಈ ರಶ್ಯ ಹಗರಣದ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಗಳು, ಕಾನೂನು ಇಲಾಖೆ ಮತ್ತು ನಾಲ್ಕು ಕಾಂಗ್ರೆಸ್ ಸಮಿತಿಗಳು ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ತನಿಖೆಯನ್ನು ಎದುರಿಸುವಂತೆ ಡೆಮಾಕ್ರಟಿಕ್ ಪಕ್ಷ ಸೆಶನ್ಸ್‌ರನ್ನು ಒತ್ತಾಯಿಸಿದೆ ಹಾಗೂ ವಿಸ್ತ್ರತ ತನಿಖೆಯೊಂದರ ಉಸ್ತುವಾರಿ ನೋಡಿಕೊಳ್ಳಲು ಸ್ವತಂತ್ರ ವಿಶೇಷ ತನಿಖಾಧಿಕಾರಿಯೊಬ್ಬರನ್ನು ನೇಮಿಸುವಂತೆ ಕಾಂಗ್ರೆಸನ್ನು ಒತ್ತಾಯಿಸಿದೆ. ಸೆಶನ್ಸ್ ಟ್ರಂಪ್ ಆಡಳಿತದ ಉನ್ನತ ಕಾನೂನು ಅನುಷ್ಠಾನ ಅಧಿಕಾರಿಯಾಗಿದ್ದಾರೆ.
‘‘ರಶ್ಯದ ಅಧಿಕಾರಿಗಳೊಂದಿಗಿನ ಸಂಪರ್ಕಗಳ ಬಗ್ಗೆ ಸೆಶನ್ಸ್ ತಪ್ಪು ಹೇಳಿಕೆಗಳನ್ನು ನೀಡಿರುವುದರಿಂದ, ಟ್ರಂಪ್ ಸಹಾಯಕರು ರಶ್ಯದೊಂದಿಗೆ ಹೊಂದಿರುವ ಸಂಬಂಧಗಳ ಬಗ್ಗೆ ತನಿಖೆ ನಡೆಸಲು ವಿಶೇಷ ವಕೀಲರೊಬ್ಬರು ಅಗತ್ಯವಿದೆ’’ ಎಂದು ಸೆನೆಟ್ ಗುಪ್ತಚರ ಸಮಿತಿಯ ಸದಸ್ಯ ಡೆಮಾಕ್ರಟಿಕ್ ಸೆನೆಟರ್ ರಾನ್ ವೈಡನ್ ಹೇಳಿದರು.
ಜುಲೈ, ಸೆಪ್ಟಂಬರ್‌ನಲ್ಲಿ ಭೇಟಿ
ಮಾಜಿ ಸೆನೆಟರ್ ಜೆಫ್ ಸೆಶನ್ಸ್ ರಶ್ಯದ ರಾಯಭಾರಿ ಸರ್ಗಿ ಕಿಸ್‌ಲ್ಯಾಕ್‌ರನ್ನು ಜುಲೈ ಮತ್ತು ಸೆಪ್ಟಂಬರ್‌ನಲ್ಲಿ ಭೇಟಿಯಾಗಿದ್ದಾರೆ ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಚುನಾವಣಾ ಪ್ರಚಾರದ ವೇಳೆ ಸೆಶನ್ಸ್ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್‌ಗೆ ವಿದೇಶ ನೀತಿ ಮತ್ತು ಇತರ ವಿಷಯಗಳ ಸಲಹಾಕಾರರಾಗಿದ್ದರು.
ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪದ ಬಗ್ಗೆ ಆಗ ಆರೋಪಗಳು ಕೇಳಿಬರುತ್ತಿದ್ದವು.
ರಶ್ಯನ್ನರೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದಿದ್ದರು
ಜನವರಿ 10ರಂದುದ ನಡೆದ ಸೆನೆಟ್ ನ್ಯಾಯಾಂಗ ಸಮಿತಿಯ ವಿಚಾರಣೆಯ ವೇಳೆ, ಟ್ರಂಪ್ ಅಭಿಯಾನ ಸದಸ್ಯರು ಮತ್ತು ರಶ್ಯದ ನಡುವಿನ ಸಂಪರ್ಕಗಳ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದು ಅಟಾರ್ನಿ ಜನರಲ್ ಜೆಫ್ ಸೆಶನ್ಸ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
‘‘ರಶ್ಯನ್ನರೊಂದಿಗೆ ನಾನು ಯಾವುದೇ ಸಂಪರ್ಕಗಳನ್ನು ಹೊಂದಿಲ್ಲ’’ ಎಂದು ಅವರು ಪ್ರಮಾಣ ಮಾಡಿ ಹೇಳಿದ್ದರು.







