ಅಂಬ್ಲಮೊಗರು: ಕುಡಿಯುವ ನೀರು ಅಯೋಗ್ಯ; ಕ್ರಮಕ್ಕೆ ಡಿವೈಎಫ್‌ಐ ಮನವಿ

ಮಂಗಳೂರು, ಮಾ.2: ಅಂಬ್ಲಮೊಗರು ಗ್ರಾಮದ ವ್ಯಾಪ್ತಿಯ ಪಡ್ಡಾಯಿಗುಡ್ಡ, ಸಣ್ಣಮದಕ, ಅಡು ಪ್ರದೇಶದ ಕೊಳವೆ ಬಾವಿಗಳಲ್ಲಿನ ನೀರು ಕುಡಿಯಲು ಅಯೋಗ್ಯವಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಜಿಪಂ ಸಿಇಒಗೆ ಡಿವೈಎಫ್‌ಐ ಮದಕ ಘಟಕ ಮನವಿ ಮಾಡಿದೆ.
ನೀರಿನ ಕಲುಷಿತದ ಬಗ್ಗೆ ಕಳೆದ ಎರಡ್ಮೂರು ವರ್ಷದಿಂದ ಗ್ರಾಪಂ ಆಡಳಿತಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಹಾಗಾಗಿ ಆಹಾರ ಸಚಿವ ಯು.ಟಿ.ಖಾದರ್‌ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಡಿವೈಎಫ್‌ಐ ಮದಕ ಘಟಕ ಎಚ್ಚರಿಸಿದೆ.
ಇಲ್ಲಿ ಸರಕಾರಿ ಹಿ.ಪ್ರಾ.ಶಾಲೆ, ಅಂಗನವಾಡಿ ಕೇಂದ್ರಗಳಿವೆ. ವಿದ್ಯಾರ್ಥಿಗಳ ಸಹಿತ ಎಲ್ಲರೂ ಈ ಕೊಳವೆಬಾವಿಯ ನೀರನ್ನು ಬಳಸುತ್ತಾರೆ. ಪಡ್ಡಾಯಿಗುಡ್ಡೆಯ ಕೊಳವೆಬಾವಿಯ ನೀರನ್ನು ಸೂಕ್ಷ್ಮಾಣುಜೀವಿ ತಜ್ಞರು ಮತ್ತು ಹಿರಿಯ ಆರೋಗ್ಯ ಸಹಾಯಕರು ಸಂಗ್ರಹಿಸಿ ಮೈಸೂರಿನ ವಿಭಾಗೀಯ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಅಲ್ಲಿನ ವರದಿ ಪ್ರಕಾರ ಈ ನೀರು ಕುಡಿಯಲು ಯೋಗ್ಯವಲ್ಲ. ನೀರಿನ ಗುಣಮಟ್ಟದ ಬಗ್ಗೆ ಎರಡ್ಮೂರು ವರ್ಷದಿಂದ ಸ್ಥಳೀಯ ಗ್ರಾಪಂಗೆ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ಇದೀಗ ಸರಕಾರಿ ವರದಿಯೇ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರಗಿಸಬೇಕು. ಗ್ರಾಮದ ನಾಲ್ಕು ಕೆರೆಗಳ ಹೂಳೆತ್ತಿ ಕುಡಿಯುವ ನೀರನ್ನು ಪೂರೈಸಲು ಕ್ರಮ ಜರಗಿಸಬೇಕು ಎಂದು ಡಿವೈಎಫ್‌ಐ ಮದಕ ಘಟಕದ ಅಧ್ಯಕ್ಷ ಸಲೀಂ ಮದಕ ಮತ್ತು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘದ (ಸಿಐಟಿಯು) ಅಧ್ಯಕ್ಷ ಇಬ್ರಾಹೀಂ ಮದಕ ಒತ್ತಾಯಿಸಿದ್ದಾರೆ.





