ನಾನು ಕೋಮುವಾದಿಯಲ್ಲ: ಜಯಂತ್ ಭಟ್
ಮುದರಂಗಡಿ ಮಸೀದಿಗೆ ಕಲ್ಲು ಎಸೆತ ಪ್ರಕರಣ

ಪಡುಬಿದ್ರಿ, ಮಾ.2: ಮುದರಂಗಡಿಯಲ್ಲಿ ನಡೆದ ಘಟನೆಯ ಬಗ್ಗೆ ಮುದರಂಗಡಿಯ ಮುಸ್ಲಿಮ್ ಸಮುದಾಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೆ. ನಾನು ಯಾವತ್ತೂ ಕೋಮುವಾದಿಯಲ್ಲ ಎಂದು ಎಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ್ ಭಟ್ ಸ್ಪಷ್ಟಪಡಿಸಿದ್ದಾರೆ.
ಮುದರಂಗಡಿಯಲ್ಲಿ ನಡೆಯುತ್ತಿರುವ ಆತಂಕ ಸೃಷ್ಟಿಗೆ ಎಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ್ ಭಟ್ ಅವರು ಕಾರಣರಾಗಿದ್ದಾರೆ ಎಂದು ಮುಸ್ಲಿಮ್ ಸಂಘಟನೆಗಳ ಮುಖಂಡ ಎಂ.ಪಿ.ಮೊಯ್ದಿನಬ್ಬ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದರು.
ನಾನು ಇತ್ತೀಚಿನ ದಿನಗಳಲ್ಲಿ ಮುಲ್ಕಿಯಲ್ಲಿ ವಾಸಿಸುತ್ತಿದ್ದು, ಘಟನೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮುದರಂಗಡಿ ಜಾಮಿಯಾ ಮಸೀದಿಯು ನನ್ನ ವಾರ್ಡಿನಲ್ಲಿ ಇರುವುದರಿಂದ, ಅಲ್ಲಿಯ ಮುಸ್ಲಿಮ್ ಮುಖಂಡರನ್ನು ನಾನು ಸಂಪರ್ಕಿಸಿ, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೆ. ಅವರೆಲ್ಲರೂ ನನ್ನ ಪರಿಚಿತರೇ ಆಗಿದ್ದರಿಂದ ಅವರಲ್ಲಿ ಸಲಿಗೆಯಲ್ಲಿಯೇ ಮಾತನಾಡಿದ್ದೇನೆ ನದೀಂ ಹಾಗೂ ಮುನಾಫ್‌ರವರು ನನ್ನ ಸಂಸ್ಥೆಯಲ್ಲಿ ಕೆಲಸ ಮಾಡಿರುವುದರಿಂದ ನಾನು ಅವರಲ್ಲಿ ಮಾತನಾಡಿ, ಜಗಳ- ಗಲಾಟೆ ಮಾಡದಿರಿ ಬೇರೆಯವರ ಮಾತಿಗೆ ಕಿವಿ ಕೊಡದೆ ನಿಮ್ಮಷ್ಠಕ್ಕೆ ನೀವಿರಿ ಎಂದು ಹೇಳಿದ್ದು ನಿಜ. ಅವರಿಗೆ ನಾನು ಯಾವುದೇ ಧಮಕಿ ಹಾಕಿಲ್ಲ. ಈ ಬಗ್ಗೆ ನಾನು ಯಾವ ಕ್ಷೇತ್ರದಲ್ಲಿ ಯೂ ಪ್ರಮಾಣ ಮಾಡಲು ಸಿದ್ದ ಎಂದಿದ್ದಾರೆ.
ಈ ಸಂಧರ್ಭ ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತಿ ಮಧ್ವರಾಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.





