ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ದೇಶದ ವಿರುದ್ಧ ಮಾತಾಡುವ ಹಕ್ಕಲ್ಲ ಎಂದ ಭೈಯ್ಯಾಜಿ
ರಾಮ್ ಜಸ್ ಕಾಲೇಜು ವಿವಾದಕ್ಕೆ ಧುಮುಕಿದ ಆರೆಸ್ಸೆಸ್

ಹೊಸದಿಲ್ಲಿ,ಫೆ. 2: ಕೆಲವುದಿನಗಳ ಹಿಂದೆ ರಾಮ್‌ಜಸ್ ಕಾಲೇಜಿನಲ್ಲಿ ನಡೆದ ಘರ್ಷಣೆ ಈಗ ರಾಜಕೀಯ ತಿರುವನ್ನು ಪಡೆದುಕೊಂಡಿದೆ. ಕ್ರೀಡಾಪಟುಗಳು, ರಾಜಕಾರಣಿಗಳು, ಬಾಲಿವುಡ್ ವ್ಯಕ್ತಿಗಳು, ಈಗ ಆರೆಸ್ಸೆಸ್ ಕೂಡಾ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದೆ. ಕಾಲೇಜಿನಲ್ಲಿ ನಡೆದ ದಂಗೆಯಲ್ಲಿಎಡಪಂಥೀಯರ ಹಸ್ತ ಇದೆ ಎಂದು ಆರೆಸ್ಸೆಸ್ ಭಾವಿಸಿದೆ. ಆರೆಸ್ಸೆಸ್ ಸಹಕಾರ್ಯವಾಹಕ್ ಭೈಯ್ಯಾಜಿ ಜೋಶಿ "ಪ್ರಕರಣದಲ್ಲಿ ಎಡಪಂಥೀಯರ ಕೈವಾಡವಿದೆ. ಅವರು ಕ್ಯಾಂಪಸ್‌ಗೆ ಹೋಗಿ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದ್ದಾರೆ. ದೇಶದಲ್ಲಿ ತಮ್ಮ ವಿಚಾರಧಾರೆಯನ್ನು ಹೆಚ್ಚಿಸಲು ಎಡಪಂಥೀಯರು ಇಂತಹ ಸಂಚು ಮಾಡುತ್ತಿದಾರೆ. ಇದು ಅವರ ಯೋಜನಾಬದ್ಧ ಕೆಲಸವಾಗಿದೆ. ಎಡಪಕ್ಷಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿವೆ. ಆದ್ದರಿಂದ ದೇಶದಲ್ಲಿ ಇಂತಹ ಸ್ಥಿತಿ ನಿರ್ಮಾಣಗೊಂಡಿದೆ" ಎಂದು ಹೇಳಿದ್ದಾರೆ. ಭೈಯ್ಯಾಜಿ ಯುನಿವರ್ಸಿಟಿಗೆ ಎಚ್ಚರಿಕೆ ನೀಡಿ, “ದೇಶದ್ರೋಹದ ವಾತಾವರಣವನ್ನು ಯಾರು ಸೃಷ್ಟಿಸುತಿದ್ದಾರೆನ್ನುವುದರ ಬಗ್ಗೆ ನೀವು ಚಿಂತಿಸಬೇಕು. ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು” ಎಂದು ಹೇಳಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ರಾಷ್ಟ್ರದ ವಿರುದ್ಧ ಮಾತಾಡುವ ಸ್ವಾತಂತ್ರ್ಯವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಜೆಎನ್‌ಯುನಲ್ಲಿ, ಈ ವರ್ಷ ರಾಮಜಸ್ ಕಾಲೇಜಿನಲ್ಲಿ ಕಾಶ್ಮೀರ ಮತ್ತು ಬಸ್ತರ್‌ನ ಸ್ವಾತಂತ್ರ್ಯಕ್ಕಾಗಿ ಘೋಷಣೆ ಕೇಳಿಬಂದಿದೆ. ಇದಕ್ಕಿಂತ ಮೊದಲು ಈ ಪ್ರಕರಣದಲ್ಲಿ ಶಹೀದ್ ಮಂದೀಪ್ ಸಿಂಗ್‌ರ ಪುತ್ರಿ ಗುರ್ಮೆಹರ್ ಎಬಿವಿಪಿ ವಿರುದ್ಧ ಸೋಶಿಯಲ್ ಮೀಡಿಯದಲ್ಲಿ ಒಂದು ಅಭಿಯಾನ ಪ್ರಾರಂಭಿಸಿದ್ದಾರೆ. ನಂತರ ಬಹಳಷ್ಟು ಜನರು ಅವರನ್ನು ಬೆಂಬಲಿಸಿದ್ದಾರೆ. ಕೆಲವರು ಅವರಿಗೆ ಕೊಲೆ ಬೆದರಿಕೆಹಾಕಿದ್ದಾರೆ. ಸಾಮೂಹಿಕ ಅತ್ಯಾಚಾರ ನಡೆಸುವ ಬೆದರಿಕೆಯನ್ನೂ ಹಾಕಿದ್ದಾರೆ. ಈಗ ಪ್ರಕರಣಕ್ಕೆ ಕಾವೇರುತ್ತಿದೆ. ಗುರ್ಮೆಹರ್ ಗೆ ಬಾಲಿವುಡ್‌ನಿಂದ ಹಿಡಿದು ಕ್ರಿಡಾಪಟುಗಳವರೆಗೆ ಬೆಂಬಲದ ಮಹಾಪೂರವೇ ಹರಿದು ಬಂದಿದೆ ಎಂದು ವರದಿ ತಿಳಿಸಿದೆ.