ಪುತ್ತೂರು: ವಿದ್ಯುತ್ ಶಾಕ್‌ನಿಂದ ಲೈನ್‌ಮೆನ್ ಮೃತ್ಯು: ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಕುಟುಂಬಸ್ಥರ ಆಕ್ರೋಶ

ಪುತ್ತೂರು : ವಿದ್ಯುತ್ ಕಂಬವೇರಿ ದುರಸ್ತಿಗೊಳಿಸುತ್ತಿದ್ದ ವೇಳೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಬಾಗಲಕೋಟೆ ತಾಲೂಕಿನ ನೀರಳಕೆರೆ ನಿವಾಸಿ ಗುರುವಪ್ಪ ಅವರ ಪುತ್ರ ಶ್ರೀಶೈಲ ಶ್ರೀಶೈಲ ಅವರು ಮೃತಪಟ್ಟಿರುವುದಕ್ಕೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಗುರುವಾರ ಸಂಜೆ ವೇಳೆಗೆ ಮೃತನ ಸಂಬಂಧಿಕರು ಹಾಗೂ ಸ್ನೇಹಿತರು ಪುತ್ತೂರು ಸರ್ಕಾರಿ ಆಸ್ಪತ್ರೆಯ ಮುಂಬಾಗ ಆಕ್ರೋಶ ವ್ಯಕ್ತಪಡಿಸಿದರು.
ಮೃತ ಶ್ರೀಶೈಲ ಅವರ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ತಂದು ಶವಾಗಾರದಲ್ಲಿ ಇರಿಸಲಾಗಿದ್ದು, ಆಸ್ಪತ್ರೆಗೆ ಆಗಮಿಸಿದ ಮೃತರ ಇಬ್ಬರು ಸಹೋದರರು,ಸಂಬಂಧಿಕರು ಹಾಗೂ ಸ್ನೇಹಿತರು ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರೊಬೆಷನರಿ ಅವಧಿಯಲ್ಲಿರುವ ಲೈನ್‌ಮೆನ್‌ಗಳನ್ನು ವಿದ್ಯುತ್ ಕಂಬಕ್ಕೆ ಹತ್ತಿಸಿ ಕೆಲಸ ಮಾಡಿಸಬಾರದೆಂಬ ಆದೇಶವಿದ್ದರೂ ಇಲ್ಲಿನ ಸವಣೂರು ಶಾಖೆಯ ಮೆಸ್ಕಾಂ ಇಂಜಿನಿಯರ್ ಹಾಗೂ ಹಿರಿಯ ಲೈನ್‌ಮೇನ್ ಅವರು ಶ್ರೀಶೈಲನನ್ನು ಕಾನೂನು ಬಾಹಿರವಾಗಿ ವಿದ್ಯುತ್ ಕಂಬಕ್ಕೆ ಹತ್ತಿಸಿದ್ದಾರೆ. ಇವರಿಬ್ಬರ ನಿರ್ಲಕ್ಷ್ಯತನದಿಂದಲೇ ಸಾವು ಸಂಭವಿಸಿದೆ ಎಂದು ಅವರು ಆರೋಪಿಸಿದರು.
ಪುತ್ತೂರಿನ ಮೆಸ್ಕಾಂ ಸಹಾಯಕ ಅಭಿಯಂತರು ಅವರು ಆಸ್ಪತ್ರೆಗೆ ಆಗಮಿಸಿದ ವೇಳೆ ಮೃತರ ಸಂಬಂಧಿಕರು ಹಾಗೂ ಸ್ನೇಹಿತರು ಸವಣೂರು ಶಾಖೆಯ ಮೆಸ್ಕಾಂ ಇಂಜಿನಿಯರ್ ಹಾಗೂ ಶ್ರೀಶೈಲ ಅವರನ್ನು ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ಹಿರಿಯ ಲೈನ್‌ಮೆನ್ ಇಲ್ಲಿಗೆ ಬರುವ ತನಕ ನಾವು ಪೊಲೀಸರಿಗೆ ದೂರು ಕೊಡಲು ಹೋಗುವುದಿಲ್ಲ ,ಎಷ್ಟು ಸಮಯ ಬೇಕಾದರೂ ಕಾಯುತ್ತೇನೆ. ಅವರನ್ನು ಇಲ್ಲಿಗೆ ಕರೆಸಿ, ಜೀವಕ್ಕೆ ಎಷ್ಟು ಬೆಲೆ ಇದೆ ಎನ್ನುವುದು ಅವರಿಗೂ ಗೊತ್ತಾಗಲಿ ಎಂದು ಆಗ್ರಹಿಸಿದರು.
ಮೆಸ್ಕಾಂನ ಸಹಾಯಕ ಅಭಿಯಂತರರು ಹಾಗೂ ಅಲ್ಲಿ ಸೇರಿದ್ದ ಕೆಲ ಮೆಸ್ಕಾಂ ಗುತ್ತಿಗೆದಾರರು ಅವರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದರೂ ಅವರು ತಮ್ಮ ಪಟ್ಟು ಬಿಡದೆ ಆಕ್ರೋಶ ತೋಡಿಕೊಂಡರು.
ಶ್ರೀಶೈಲ ಅವರನ್ನು ಕೆಲಸಕ್ಕೆ ತರೆದುಕೊಂಡು ಹೋಗಿದ್ದ ಹಿರಿಯ ಲೈನ್‌ಮೆನ್ ಎ.ಸಿದ್ದಪ್ಪ ಅವರು ಆಸ್ಪತ್ರೆಗೆ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಟ್ಟಿರುವುದು ಹಾಗೂ ಘಟನೆ ನಡೆದು ಮೂರು ಗಂಟೆಗಳ ಬಳಿಕವಷ್ಟೇ ಆಸ್ಪತ್ರೆಗೆ ಆಗಮಿಸಿದ ಸವಣೂರು ಶಾಖೆಯ ಮೆಸ್ಕಾಂ ಇಂಜಿನಿಯರ್ ರಮೇಶ್ ಅವರು ನೀಡಿದ ವಿಭಿನ್ನ ಹೇಳಿಕೆ ಮೃತರ ಸಂಬಂಧಿಕರನ್ನು ಮತ್ತಷ್ಟು ಕೆರಳಿಸಿತು.
ತಾನು ಗ್ರಾಮ ಸಭೆಗೆ ಹೋಗಿದ್ದು, ತಾನು ಶ್ರೀಶೈಲ ಅವರಲ್ಲಿ ಯಾವುದೇ ಕೆಲಸ ಮಾಡಲು ಹೇಳಿಲ್ಲ ಎಂದು ಆರಂಭದಲ್ಲಿ ತಿಳಿಸಿದ್ದ ಮೆಸ್ಕಾಂ ಇಂಜೀನಿಯರ್ ರಮೇಶ್ ಅವರು ಆ ಬಳಿಕ ಸ್ಟೇವಯರ್ ಕಟ್ ಆಗಿರುವ ಕುರಿತು ದೂರು ಬಂದಿತ್ತು. ತಾನು ಈ ಬಗ್ಗೆ ಲೈನ್ ಮೇನ್ ಸಿದ್ದಪ್ಪರಿಗೆ ತಿಳಿಸಿದ್ದೆ ಎಂದಿದ್ದರು. ಈ ವೇಳೆ ಮೃತರ ಕಡೆಯವರು ಇಂಜಿನಿಯರ್ ಅವರು ಆಗೊಂದು ಈಗೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಗೆ ಆಗಮಿಸಿದ ಪೊಲೀಸರೊಬ್ಬರು ಗಲಾಟೆ ಮಾಡಿದರೆ ನಿಮ್ಮನ್ನು ಬಿಡುವುದಿಲ್ಲ ಎಂದು ಗದರಿಸಿದರು. ಈ ಮಾತು ದುಃಖದಲ್ಲಿದ್ದ ಮೃತರ ಸಂಬಂಧಿಕರ ದುಃಖವನ್ನು ಇಮ್ಮಡಿಗೊಳ್ಳಲು ಕಾರಣವಾಯಿತು. ನಿಮಗಾರಿಗೂ ಜೀವದ ಬೆಲೆ ಗೊತ್ತಾಗುತ್ತಿಲ್ಲ. ನಮಗೆ ಅನ್ಯಾಯ ಮಾಡಿದರೆ ನಿಮ್ಮ ಪತ್ನಿ,ಮಕ್ಕಳಿಗೂ ಇದೇ ಗತಿ ಬರದೆ ಇರದು ಎಂದು ಹಿಡಿ ಶಾಪ ಹಾಕಿದ ಘಟನೆಯೂ ನಡೆಯಿತು.
ಮೃತ ಶ್ರೀಶೈಲ ಅವರು, ಪತ್ನಿ, 2 ವರ್ಷ ಹಾಗೂ 9 ತಿಂಗಳ ಇಬ್ಬರು ಪುತ್ರರು, ತಂದೆ,ತಾಯಿ ಹಾಗೂ ನಾಲ್ವರು ಸಹೋದರನ್ನು ಅಗಲಿದ್ದಾರೆ. ಶ್ರೀಶೈಲ ಅವರ ಅಣ್ಣ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಇನ್ನೊಬ್ಬ ಸಹೋದರ ಮಂಗಳೂರಿನ ಗುರುಪುರ ಮೆಸ್ಕಾಂ ಶಾಖೆಯಲ್ಲಿ ಲೈನ್ ಮೆನ್ ಆಗಿದ್ದಾರೆ.





