ಜೆಎನ್‌ಯು ವಿಡಿಯೋ ದೃಶ್ಯಾವಳಿ ತಿರುಚಿದ ಪ್ರಕರಣ : ಸ್ಮತಿ ಇರಾನಿ ಸಹಾಯಕಿ ಶಿಲ್ಪಿ ತಿವಾರಿ ಪಾತ್ರ ಸಾಬೀತು..?

ಹೊಸದಿಲ್ಲಿ, ಮಾ.2: ಜೆಎನ್‌ಯು ವಿಡಿಯೋ ದೃಶ್ಯಾವಳಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾಜಿ ಸಚಿವೆ ಸ್ಮತಿ ಇರಾನಿಯವರ ನಿಕಟ ಸಹಾಯಕಿ ಎನ್ನಲಾಗಿರುವ ಶಿಲ್ಪಿ ತಿವಾರಿ ಅವರ ಪಾತ್ರದ ಬಗ್ಗೆ ಈಗ ಸಂಶಯ ಹೆಚ್ಚಿದೆ. ಪ್ರಕರಣದ ವಿಚಾರಣೆ ಅಂಗವಾಗಿ ದಿಲ್ಲಿ ಸರಕಾರ ನಡೆಸಿರುವ ವಿಧಿವಿಜ್ಞಾನ ಪ್ರಯೋಗದ ವರದಿಯಲ್ಲಿ ಶಿಲ್ಪಿ ತಿವಾರಿ ಅವರ ಟ್ವಿಟರ್ ಖಾತೆ ಈ ತಿರುಚಲಾಗಿರುವ ವಿಡಿಯೋ ದೃಶ್ಯದ ಮೂಲ ಎಂದು ಕಂಡುಬಂದಿದೆ.
ವರದಿ ಪ್ರಕಾರ ಕನಿಷ್ಟ ಮೂರು ವಿಡಿಯೋಗಳು ಶಂಕಾಸ್ಪದವಾಗಿದೆ. ಇದರಲ್ಲಿ ಕ್ಯೂ 2 ತಿವಾರಿಗೆ ಸಂಬಂಧಿಸಿದ್ದಾಗಿದೆ. ವಿಡಿಯೋದಲ್ಲಿ ಕೇಳಿ ಬರುವ ಧ್ವನಿಯು ಈ ವಿಡಿಯೋಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಕ್ಯು 1 ಮತ್ತು 2ರಲ್ಲಿ ಕಂಡು ಬರುವ ತುಟಿಗಳ ಚಲನೆಯಲ್ಲಿ ಇರುವ ವ್ಯತ್ಯಾಸದಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ ಇಲ್ಲಿ ಕೇಳಿ ಬರುವ ಸಂಭಾಷಣೆ ನೈಜವಲ್ಲ ಮತ್ತು ಇಲ್ಲಿ ಮಾತನಾಡುವ ವ್ಯಕ್ತಿಗಳ ಧ್ವನಿ ಇದಲ್ಲ ಎಂದು ತಿಳಿಸಲಾಗಿದೆ.
ಇನ್ನೊಂದೆಡೆ, ಕ್ಯು 2ರಲ್ಲಿ ಮುದ್ರಿತಗೊಂಡಿರುವ ಧ್ವನಿಯು ಶಿಲ್ಪಿ ತಿವಾರಿ ಅವರ ಹೆಸರಲ್ಲಿರುವ ಟ್ವಿಟರ್ ಖಾತೆಯ ಧ್ವನಿಯನ್ನು ಹೋಲುತ್ತದೆ. ಈ ಹಿನ್ನೆಲೆಯಲ್ಲಿ, ಇಲ್ಲಿ ಕಂಡು ಬರುವ ದೃಶ್ಯ ಮತ್ತು ಧ್ವನಿಯ ವಿಡಿಯೋಗಳಿಗೆ ಒಂದಕ್ಕೊಂದು ಸಂಬಂಧವಿಲ್ಲ. ಇವನ್ನು ನೈಜ ಘಟನೆಯಂತೆ ಬಿಂಬಿಸಲು ಸೇರಿಸಲಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕ್ಯು 1ರಲ್ಲಿ, 38 ಸೆಕೆಂಡ್ ಅವಧಿಯ ಯೂಟ್ಯೂಬ್ ವಿಡಿಯೋದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ನಯ್ಯ ಕುಮಾರ್, ದೇಶ ವಿರೋಧಿ ಘೋಷಣೆ ಕೂಗುವ ದೃಶ್ಯವಿದೆ. ಕ್ಯು 2ರಲ್ಲಿ ದೃಶ್ಯ ಮತ್ತು ಧ್ವನಿ ಸ್ಪಷ್ಟವಾಗಿಲ್ಲ. ಆದರೆ ಇದನ್ನು ತಿರುಚಿ, ನೈಜ ಎಂಬಂತೆ ಬಿಂಬಿಸಲಾಗಿದೆ ಎಂದು ವರದಿ ತಿಳಿಸಿದೆ.
ಟ್ರುಥ್‌ಲ್ಯಾಬ್ಸ್ ಎಂಬ ಸಂಸ್ಥೆ ಈ ವಿಧಿವಿಜ್ಞಾನ ಪ್ರಯೋಗ ನಡೆಸಿದ್ದು ಫೆ.18ರಂದು ಐದು ವಿಡಿಯೋಗಳನ್ನು ಹಾಗೂ ಫೆ.22ರಂದು ಮತ್ತೆರಡು ವಿಡಿಯೋಗಳನ್ನು ಸಲ್ಲಿಸಿದೆ.
ಈ ವರದಿಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಎಚ್‌ಆರ್‌ಡಿ ಸಚಿವಾಲಯ, ಶಿಲ್ಪಿ ತಿವಾರಿ ಖಾಸಗಿ ನೆಲೆಯಲ್ಲಿ ಸ್ಮತಿ ಇರಾನಿಗೆ ಸಹಾಯ ಮಾಡಿರಬಹುದು ಎಂದು ತಿಳಿಸಿದೆ. ಆಕೆಗೆ ಅಧಿಕೃತವಾಗಿ ಯಾವುದೇ ಕಾರ್ಯ ವಹಿಸಿಲ್ಲ. ಈ ಹಿಂದೆ ಆಕೆಗೆ ಹುದ್ದೆಯ ಪ್ರಸ್ತಾಪ ನೀಡಲಾಗಿತ್ತು. ಆದರೆ ಆಕೆ ಒಪ್ಪಿಕೊಂಡಿಲ್ಲ ಎಂದು ಎಚ್‌ಆರ್‌ಡಿ ಇಲಾಖೆಯ ವಕ್ತಾರ ಘನಶ್ಯಾಂ ಗೋಯೆಲ್ ತಿಳಿಸಿದ್ದಾರೆ.







