ಬಂಟ್ವಾಳ: ಬೇಡಿಕೆ ಈಡೇರಿಸಿ ಕಸ ಸಂಸ್ಕರಣಾ ಘಟಕ ನಿರ್ಮಿಸಲು ಗ್ರಾಪಂ ಅಧ್ಯಕ್ಷ ನಾಸಿರ್ ಸಜಿಪ ಆಗ್ರಹ

ಬಂಟ್ವಾಳ, ಮಾ. 2: ನಮ್ಮ ಬೇಡಿಕೆಯನ್ನು ಈಡೇರಿಸಿ. ಮನೆ, ಶಾಲೆ, ಅಂಗನವಾಡಿ, ಸಮುದಾಯ ಭವನ, ಮಸೀದಿ, ಮದರಸಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ಬಳಿಕ ಬಂಟ್ವಾಳ ಪುರಸಭೆ ಕಂಚಿನಡ್ಕ ಪದವಿನಲ್ಲಿ ವೈಜ್ಞಾನಿಕ ಘನ ತ್ಯಾಜ್ಯ ಸಂಸ್ಕರಣಾ ಘಟಕ್ಕೆ ನಿರ್ಮಿಸುವುದಕ್ಕೆ ನಮ್ಮದೇನು ವಿರೋಧವಿಲ್ಲ ಎಂದು ಗುರುವಾರ ಸಜಿಪನಡು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್ ಸಜಿಪ ಸ್ಪಷ್ಟಪಡಿಸಿದ್ದಾರೆ.
ಕಂಚಿನಡ್ಕಪದವಿನಲ್ಲಿ ಪುರಸಭೆ ನಿರ್ಮಿಸುತ್ತಿರುವ ತ್ಯಾಜ್ಯ ಸಂಸ್ಕರಣಾ ಘಟಕದ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಸುದೀರ್ಘ 12 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಂಟ್ವಾಳ ಪುರಸಭೆ ಮತ್ತು ಸಜಿಪನಡು ಗ್ರಾಮ ಪಂಚಾಯತ್ ಇಂದು ಜಂಟಿ ಸಭೆಯನ್ನು ಆಯೋಜಿಸಿತು.
ಸಭೆಯ ಆರಂಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಘಟಕದ ಕುರಿತು ಮಾಹಿತಿ ನೀಡಿ, ಕಂಚಿನಡ್ಕ ಪದವಿನ 8 ಎಕರೆ ಜಮೀನು ಪುರಸಭೆಗೆ ಹಸ್ತಾಂತರಿಸಿ ಆ ಜಾಗದಲ್ಲಿ 2005ರಲ್ಲಿ ಘಟಕದ ಕಾಮಗಾರಿಯನ್ನು ಆರಂಭಿಸಲಾಗಿದೆ. ಸಂಪೂರ್ಣ ವೈಜ್ಞಾನಿಕ ರೀತಿಯಲ್ಲೇ ಈ ಘಟಕವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ಘಟಕದಲ್ಲಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಅದನ್ನು ಕೃಷಿಗೆ ಉಪಯೋಗಿಸಲಾಗುವುದು. ಘಟಕದ ಬಗ್ಗೆ ಸ್ಥಳೀಯರಲ್ಲಿ ಅನುಮಾನಗಳಿದ್ದಲ್ಲಿ ನುರಿತ ವಿಜ್ಞಾನಿ ಡಾ. ಹರೀಶ್ ಜೋಷಿರಿಂದ ಪ್ರಾತ್ಯಕ್ಷಿಗೆ ಕೊಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್.ಅಬ್ಬಾಸ್ ಪ್ರತಿಕ್ರಿಯಿಸಿ, ಸ್ಥಳೀಯ ಪಂಚಾಯತ್‌ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪುರಸಭೆ ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಿದೆ. ಈ ಘಟಕದ ಬಗ್ಗೆ ವಿರೋಧ ವ್ಯಕ್ತಪಡಿಸಿ ಈಗಾಗಲೇ ಗ್ರಾಪಂ, ತಾಪಂ, ಜಿಪಂ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಗ್ರಾಮಸ್ಥರು ಗ್ರಾಮ ಸಭೆಯನ್ನು ಕೂಡಾ ಬಹಿಷ್ಕರಿಸಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿ, ಸಚಿವರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಇದೇ ವೇಳೆ ಮಧ್ಯೆ ಪ್ರವೇಶಿಸಿದ ಅಧ್ಯಕ್ಷ ನಾಸೀರ್ ಸಜಿಪ, ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾನವಾಗಿರುವ 8 ಎಕರೆ ಜಾಗ ಬಡವರಿಗೆ ನಿವೇಶನಕ್ಕಾಗಿ ಕಾಯ್ದಿರಿಸಲಾಗಿತ್ತು. ನಿವೇಶನಕ್ಕಾಗಿ ಗ್ರಾಮಸ್ಥರಿಂದ ಪಂಚಾಯತ್‌ಗೆ ನೂರಾರು ಅರ್ಜಿಗಳು ಬಂದಿವೆ. ಆದರೆ ಬಡವರಿಗೆ ನಿವೇಶನ ನೀಡಲು ಗ್ರಾಮದಲ್ಲಿ ಸರಕಾರಿ ಜಾಗವೇ ಇಲ್ಲವಾಗಿದೆ. ಸಂಸ್ಕರಣಾ ಘಟಕ ಹೊರೆತು ಪಡಿಸಿ ಉಳಿದಿದ್ದ ಎರಡು ಎಕರೆ ಸರಕಾರಿ ಜಾಗವನ್ನು ಕೂಡಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ವಶಪಡಿಸಲಾಗಿದೆ ಎಂದು ಅವರು ಸಹಾಯಕ ಆಯುಕ್ತರ ಗಮನ ಸೆಳೆದರು.
ಸಂಸ್ಕರಣಾ ಘಟಕ ನಿರ್ಮಾಣಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ನಮ್ಮ ಬೇಡಿಕೆಯಾದ ಪರಿಸರದಲ್ಲಿರುವ ಮನೆ, ಶಾಲೆ, ಅಂಗನವಾಡಿ, ಸಮುದಾಯ ಭವನ, ಮದರಸ ಇವುಗಳಿಗೆ ಪರ್ಯಾಯ ವ್ಯವಸ್ಥೆ ಮೊದಲು ಕಲ್ಪಿಸಬೇಕು. ಘಟಕ ಸಂಪೂರ್ಣ ವೈಜ್ಞಾನಿಕವಾಗಿರಬೇಕು ಎಂದು ಆಗ್ರಹಿಸಿದರಲ್ಲದೆ ಘಟಕ ನಿರ್ಮಿಸಿದರೆ ಕೆಲಸ ಮುಗಿಯುವುದಿಲ್ಲ. ಘಟಕವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಪುರಸಭೆ ಮತ್ತು ಗ್ರಾಮ ಪಂಚಾಯತ್‌ನ ಜಂಟಿ ಸಮಿತಿ ರಚಿಸಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಘಟಕದ ನಿರ್ವಹಣೆಗೆ ಪುರಸಭೆಯನ್ನೇ ಹೊಣೆಯನ್ನಾಗಿಸಿ ಜಿಲ್ಲಾಧಿಕಾರಿ ಹಾಗೂ ಸರಕಾರಿ ಮಟ್ಟದಿಂದಲೇ ಆದೇಶವೊಂದನ್ನು ಹೊರಡಿಸಲು ಕ್ರಮ ಕೈಗೊಳ್ಳಬಹುದು. ತ್ಯಾಜ್ಯ ಸಂಸ್ಕರಣಾ ಘಟಕದ ಅನಿವಾರ್ಯತೆ ಬಂಟ್ವಾಳ ಪುರಸಭೆಗೆ ಇದ್ದು ಈ ದಿಸೆಯಲ್ಲಿ ಪರಸ್ಪರ ವಿಶ್ವಾಸವನ್ನು ಪಡೆದುಕೊಂಡು ಹಾಗೂ ಗ್ರಾಮಸ್ಥರ ಸಹಕಾರವನ್ನು ಯಾಚಿಸಿ ಮುಂದಡಿ ಇಡಬೇಕು. ಆಗ ಎಲ್ಲ ಸಮಸ್ಯೆಯೂ ಇತ್ಯಾರ್ಥವಾಗುವುದು ಎಂದು ಹೇಳಿದರು.
ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಆರೋಗ್ಯಾಧಿಕಾರಿ ರತ್ನಪ್ರಸಾದ್, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಹಾಗೂ ಗ್ರಾಪಂನ ಉಪಾಧ್ಯಕ್ಷೆ ಸುನಿತ ಶಾಂತಿ ಮೋರಸ್, ಸದಸ್ಯರಾದ ಇಕ್ಬಾಲ್, ಅಬ್ದುಲ್ ರಹಿಮಾನ್, ರಶೀದ್, ಸುರೇಶ್ ಬಂಗೇರ, ಮಾಜಿ ತಾಪಂ ಅಧ್ಯಕ್ಷ ಯಶವಂತ ದೇರಾಜೆ ಸಭೆಯಲ್ಲಿ ಭಾಗವಹಿಸಿದರು. ಪಂಚಾಯತ್ ಪಿಡಿಒ ವೀರಪ್ಪ ಗೌಡ ಸ್ವಾಗತಿಸಿದರು.
ನೀರೂ ಇಲ್ಲ... ನೆಲನೂ ಇಲ್ಲ:
ಮಂಗಳೂರು ಮಹಾನಗರ ಪಾಲಿಕೆಯ ಪಚ್ಚನಾಡಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಿದ ನಂತರ ಅಲ್ಲಿನ ಪರಿಸರದಲ್ಲಿ ಆಗುತ್ತಿರುವ ಸಮಸ್ಯೆ ಇಲ್ಲಿ ಕೂಡಾ ನಿರ್ಮಾಣವಾಗಲಿದೆ ಎಂದು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ ಸಜಿಪನಡು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಮತ್ತು ಅಬ್ದುಲ್ ರಹ್ಮಾನ್, ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಘನ ತ್ಯಾಜ್ಯ ಸಂಸ್ಕರಣಾ ಘಟಕ ಮತ್ತು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಸಜಿಪನಡು ಗ್ರಾಮದ ಸರಕಾರಿ ಭೂಮಿಯನ್ನು ಬಳಸಿಕೊಳ್ಳಲಾಗಿದೆ.
ಆದರೆ ನಮ್ಮ ಗ್ರಾಮಸ್ಥರಿಗೆ ಯೋಜನೆಯ ನೀರೂ ಇಲ್ಲ, ನೆಲನೂ ಇಲ್ಲದಂತ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಒಂದಾ ಸಂಸ್ಕರಣಾ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಿ. ಇಲ್ಲದಿದ್ದರೆ ನಮ್ಮ ಬೇಡಿಕೆಯನ್ನು ಈಡೇರಿಸಿ ಮತ್ತೆ ಘಟಕದ ಕಾಮಗಾರಿ ಆರಂಭಿಸಿ. ಆದುವರೆಗೆ ಕಾಮಗಾರಿ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಭೆಯಲ್ಲಿ ಎಚ್ಚರಿಸಿದರು.
ಎಸಿಯಿಂದ ಘಟಕದ ಪರಿಶೀಲನೆ:
ಸಭೆಯ ಬಳಿಕ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಘಟಕ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಖ್ಯಾಧಿಕಾರಿ ಸುಧಾಕರ್‌ರಿಂದ ಘಟಕದಲ್ಲಿ ಕಸ ವಿಲೇವಾರಿಯ ಕುರಿತಂತೆ ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟಕದಿಂದಾಗಿ ಗ್ರಾಮಸ್ಥರಲ್ಲಿ ಉಂಟಾಗಿರುವ ಭೀತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನುರಿತ ವಿಜ್ಞಾನಿ ಡಾ. ಹರೀಶ್ ಜೋಷಿ ಅವರಿಂದ ಸ್ಥಳದಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುವುದು. ಕಾರ್ಕಳ ಮತ್ತು ಮೂಡಬಿದರೆ ಪುರಸಭೆ ಈಗಾಗಲೇ ನಿರ್ಮಿಸಿರುವ ಘಟಕದ ಮಾದರಿಯಲ್ಲೇ ವೈಜ್ಞಾನಿಕವಾಗಿ ಇಲ್ಲೂ ಸಂಸ್ಕರಣಾ ಘಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಕೋರಲಾಗುವುದು. ಗ್ರಾಮ ಪಂಚಾಯತ್ ಮುಂದಿಟ್ಟಿರುವ ಬೇಡಿಕೆಯನ್ನು ಪರಿಹರಿಸಲು ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗುವುದು ಎಂದರು.







