ಸಿಲಿಂಡರ್ ದರ ಸ್ಫೋಟ! : ಸಬ್ಸಿಡಿಯೇತರ ಎಲ್‌ಪಿಜಿ ಬೆಲೆ 86 ರೂ.ಹೆಚ್ಚಳ
ಭಾರತದ ಇತಿಹಾಸದಲ್ಲಿಯೇ ದಾಖಲೆಯ ಏರಿಕೆ

ಹೊಸದಿಲ್ಲಿ,ಮಾ.2: ಸಬ್ಸಿಡಿಯೇತರ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 86 ರೂ.ಗಳಷ್ಟು ತೀವ್ರವಾಗಿ ಹೆಚ್ಚಿಸಲಾಗಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ತಮ್ಮ ಸಬ್ಸಿಡಿಯನ್ನು ತ್ಯಾಗ ಮಾಡಿದವರಿಗೆ ಭಾರೀ ಆಘಾತವಾಗಿದೆ. ಮತ್ತು ವಾರ್ಷಿಕ 12 ಸಿಲಿಂಡರ್‌ಗಳ ಕೋಟಾ ಮುಗಿದವರು ಸಬ್ಸಿಡಿಯೇತರ ಎಲ್‌ಪಿಜಿ ಸಿಲಿಂಡರ್‌ಗಳನ್ನೇ ಅವಲಂಬಿಸಿದ್ದು, ನೂತನ ಬೆಲೆ ಅವರಿಗೆ ಇನ್ನಷ್ಟು ಹೊರೆ ಹೊರಿಸಲಿದೆ.
651.50 ರೂ.ಇದ್ದ 14.2 ಕೆ.ಜಿ.ತೂಕದ ಸಬ್ಸಿಡಿಯೇತರ ಸಿಲಿಂಡರ್ ಬೆಲೆ ಈಗ 737.50 ರೂ.ಆಗಿದೆ.
ಫೆ.1ರಂದು ಸಬ್ಸಿಡಿಯೇತರ ಎಲ್‌ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 66.5 ರೂ.ಹೆಚ್ಚಿಸಲಾಗಿತ್ತು. ಅದರ ಬೆನ್ನಿಗೇ ಈಗ ದೇಶದ ಇತಿಹಾಸದಲ್ಲಿಯೇ ದಾಖಲೆಯ ಬೆಲೆ ಏರಿಕೆಯನ್ನು ಮಾಡಲಾಗಿದೆ. ಜಾಗತಿಕ ಎಲ್‌ಪಿಜಿ ಮಾರುಕಟ್ಟೆಯಲ್ಲಿನ ಬೆಲೆಗಳಿಗೆ ಅನುಗುಣವಾಗಿ ಈ ಏರಿಕೆಯನ್ನು ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
2016,ಅಕ್ಟೋಬರ್‌ನಿಂದ ಸಬ್ಸಿಡಿಯೇತರ ಎಲ್‌ಪಿಜಿ ಬೆಲೆ ಹೆಚ್ಚುತ್ತಲೇ ಇದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ದಿಲ್ಲಿಯಲ್ಲಿ 466.50 ರೂ.ಇದ್ದ ಪ್ರತಿ ಸಿಲಿಂಡರ್ ಬೆಲೆ ಈವರೆಗೆ ಆರು ಕಂತುಗಳಲ್ಲಿ 271 ರೂ.ಅಥವಾ ಶೇ.58ರಷ್ಟು ಏರಿಕೆಯಾಗಿದೆ.
ಇದೇ ವೇಳೆ ಸಬ್ಸಿಡಿ ಅಡುಗೆ ಅನಿಲ ಬೆಲೆಯನ್ನು 14.2 ಕೆ.ಜಿ ತೂಕದ ಪ್ರತಿ ಸಿಲಿಂಡರ್‌ಗೆ 13 ಪೈಸೆಗಳಷ್ಟು ಹೆಚ್ಚಿಸಲಾಗಿದ್ದು, 434.93 ರೂ.ಆಗಿದೆ. ಫೆ.1ರಂದು ಪ್ರತಿ ಸಿಲಿಂಡರ್‌ಗೆ ಒಂಭತ್ತು ಪೈಸೆ ಹೆಚ್ಚಿಸಲಾಗಿತ್ತು. ಇದಕ್ಕೂ ಮುನ್ನ ಸುಮಾರು ಎರಡು ರೂ.ನಂತೆ ಎಂಟು ಬಾರಿ ಬೆಲೆಯನ್ನು ಹೆಚ್ಚಿಸಲಾಗಿತ್ತು.
ವಿಮಾನ ಇಂಧನ ಬೆಲೆಯನ್ನು ಪ್ರತಿ ಕಿಲೋ ಲೀಟರ್‌ಗೆ 214 ರೂ.ಹೆಚ್ಚಿಸಲಾಗಿದ್ದು, ಈಗ 54,293.38 ರೂ.ಗಳನ್ನು ತೆರಬೇಕಾಗುತ್ತದೆ. ಫೆ.1ರಂದು ಶೇ. 3ರಷ್ಟು ಏರಿಕೆಯನ್ನು ಮಾಡಲಾಗಿತ್ತು.
ತೈಲ ಮಾರಾಟ ಸಂಸ್ಥೆಗಳು ಹಿಂದಿನ ತಿಂಗಳ ತೈಲಬೆಲೆ ಮತ್ತು ವಿದೇಶಿ ವಿನಿಮಯ ದರಗಳನ್ನು ಆಧರಿಸಿ ಪ್ರತಿ ತಿಂಗಳ 1ನೇ ತಾರೀಖಿಗೆ ವಿಮಾನ ಇಂಧನ ಮತ್ತು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ.
ಸಬ್ಸಿಡಿ ಸಿಲಿಂಡರ್ ಪಡೆಯುವ ಗ್ರಾಹಕರಿಗೆ ಯಾವುದೇ ಪರಿಣಾಮವಾಗುವುದಿಲ್ಲ. ಉದಾಹರಣೆಗೆ ದಿಲ್ಲಿಯಲ್ಲಿ ಹೊಸ ರಿಫಿಲ್‌ಗಾಗಿ ಗ್ರಾಹಕ 737 ರೂ.ಗಳನ್ನು ಪಾವತಿಸಬೇಕಾಗುತ್ತದೆ ಮತ್ತು ಆತನ ಬ್ಯಾಂಕ್ ಖಾತೆಗೆ 303 ರೂ.ಜಮೆಯಾಗುತ್ತದೆ. ಹೀಗಾಗಿ ಪರಿಣಾಮಕಾರಿ ಬೆಲೆ 434 ರೂ.ಗಳಷ್ಟೇ ಆಗಿರುತ್ತದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.