ಪುತ್ತೂರು: ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಹಲ್ಲೆ

ಪುತ್ತೂರು, ಮಾ.2: ಪುತ್ತೂರು ತಾಲ್ಲೂಕಿನ ಇರ್ದೆ ಗ್ರಾಮದ ಪೇರಲ್ತಡ್ಕ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕರೊಬ್ಬರು ಹೊಡೆದು ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯ ತಂದೆ ಸಂಪ್ಯ ಪೊಲೀಸ್ ಠಾಣೆಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.
ಪೇರಲ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಇಶಾಮ್ ಎಂಬಾತನಿಗೆ ಅದೇ ಶಾಲೆಯಲ್ಲಿ ಶಿಕ್ಷಕರಾಗಿರುವ ಬಾಬು ಎಂಬವರು ಕಳೆದ ಕೆಲ ಸಮಯಗಳಿಂದ ವಿನಾ ಕಾರಣಕ್ಕಾಗಿ ಹೊಡೆಯುತ್ತಿದ್ದಾರೆ. ಇತರ ಮಕ್ಕಳ ಎದುರಿನಲ್ಲಿಯೇ ‘ನೀನು ಕಳ್ಳು ಕುಡಿದುಶಾಲೆಗೆ ಬಂದಿದ್ದೀಯಾ' ಎಂದು ಹೀಯಾಳಿಸುತ್ತಿದ್ದಾರೆ. ಹಾಗೂ ತರಗತಿಯಿಂದ ಹೊರಗಡೆ ನಿಲ್ಲಿಸುತ್ತಿದ್ದಾರೆ ಇದರಿಂದ ನೊಂದಿರುವ ನನ್ನ ಮಗ ಇದೀಗ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ಇಬ್ರಾಹಿಂ ಅವರು ಬುಧವಾರ ಸಂಪ್ಯ ಪೊಲೀಸ್ ಠಾಣೆಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಶಿಕ್ಷಕ ನಡೆಸಿದ ಹಲ್ಲೆಯಿಂದಾಗಿ ಪುತ್ರ ಮಹಮ್ಮದ್ ಇಶಾಮ್‌ನ ತೊಡೆಯ ಭಾಗದಲ್ಲಿ ಗಾಯದ ಗುರುತು ಇದೆ ಎಂದು ಇಬ್ರಾಹಿಂ ಅವರು ದೂರಿನಲ್ಲಿ ತಿಳಿಸಿದ್ದಾರೆ.





