ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಉಡುಪಿ, ಮಾ.2: ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯನ್ನು ಸಿಲಿಂಡರ್ ಒಂದಕ್ಕೆ ಹಠಾತ್ತನೆ 86 ರೂ.ಗಳ ಏರಿಕೆ ಮಾಡಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಕ್ರಮವನ್ನು ವಿರೋಧಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ನಗರದ ಬಸ್‌ನಿಲ್ದಾಣದ ಬಳಿಯ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ತಾಣದಲ್ಲಿ ನಿರ್ಮಿಸಿದ ಅಡುಗೆ ಒಲೆಯಲ್ಲಿ ಬೆಂಕಿಯನ್ನು ಉರಿಸುವ ಮೂಲಕ ಜೀವನಾವಶ್ಯಕ ವಸ್ತುವಾದ ಅಡುಗೆ ಅನಿಲ ಬೆಲೆಯೇರಿಕೆಗೆ ಮಹಿಳೆಯರ ಪ್ರತಿರೋಧಕ್ಕೆ ಮೂರ್ತರೂಪ ನೀಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೊ ಮಾತನಾಡಿ, ರಾತೋರಾತ್ರಿ ಬೆಲೆಯನ್ನು ಒಮ್ಮೆಗೇ 86ರೂ. ಹೆಚ್ಚಿಸುವ ಮೂಲಕ ಮೋದಿ ಸರಕಾರ ಮಹಿಳೆಯರು ಬೀದಿಗಿಳಿಯುವಂತೆ ಮಾಡಿದೆ ಎಂದರು.
ಯುಪಿಎ ಸರಕಾರದ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯ ಏರಿಳಿತಕ್ಕ ನುಗುಣವಾಗಿ ಸಿಲಿಂಡರ್ ಒಂದರ ಬೆಲೆಯಲ್ಲಿ 2ರಿಂದ 5ರೂ. ಹೆಚ್ಚಳ ಮಾಡಿದಾಗ, ಬೀದಿ ರಂಪ, ಹಾದಿರಂಪ ಮಾಡುತಿದ್ದ ಮಹಿಳಾ ಮೋರ್ಚಾದ ಮಹಿಳೆಯರು ಈಗ ಅಡುಗೆ ಮನೆಯಲ್ಲಿ ಅಡಗಿ ಕುಳಿತಿದ್ದಾರೆ ಎಂದು ಅಣಕಿಸಿದರು.
ಅಂದು ಸಿಲಿಂಡರ್ ಒಂದರ ಬೆಲೆ 420-450ರೂ. ಆಸುಪಾಸಿನಲ್ಲಿದ್ದರೆ, ಮೂರು ವರ್ಷಗಳಲ್ಲಿ ಈ ಬೆಲೆ 750ರ ಗಡಿಯಂಚಿನಲ್ಲಿದೆ. ಕಳೆದ ಆರು ತಿಂಗಳಲ್ಲೇ ಸಿಲಿಂಡರ್ ಒಂದರ ಬೆಲೆ 300ರಷ್ಟು ಹೆಚ್ಚಳವಾದರೂ, ಬಿಜೆಪಿಯ ನಮ್ಮ ಸಹೋದರಿಯರು ಬಾಯಿಗೆ ಬೀಗ ಜಡಿದು ಕುಳಿತಿದ್ದಾರೆ. ಅವರಿಗೆ ನಮ್ಮ ಮಹಿಳೆಯರ ನೋವು ಗೊತ್ತಾಗಿದ್ದರೆ ಖಂಡಿತ ಇದನ್ನು ವಿರೋಧಿಸುತಿದ್ದರು ಎಂದರು.
ನಮ್ಮ ಸಂಸದೆ ಶೋಭಾ ಕರಂದ್ಲಾಜೆ ಅವರು ಮಹಿಳೆಯರ ನೋವನ್ನು ಅರ್ಥಮಾಡಿಕೊಂಡು ಇಂಥ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಆದರೆ ಪಾಪ ಅವರಲ್ಲಿ ಜನರ ಬಗ್ಗೆ, ಅದರಲ್ಲೂ ಮುಖ್ಯವಾಗಿ ಮಹಿಳೆಯರ ಬಗ್ಗೆ ಕಾಳಜಿಯೇ ಇಲ್ಲವಾಗಿದೆಯೇನೊ ಎಂಬ ಸಂಶಯ ಮೂಡಿಬರುತ್ತಿದೆ ಎಂದರು.
ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೆ ಮುನ್ನ ಹೇಳಿದ ಪ್ರತಿಯೊಂದು ಮಾತುಗಳಿಗೆ ವ್ಯತಿರಿಕ್ತವಾದ ನಡೆ ಹಾಗೂ ಹೇಳಿಕೆಗಳೊಂದಿಗೆ ಸುಳ್ಳುಗಳ ಸರಮಾಲೆಯನ್ನೇ ಪೋಣಿಸುತಿದ್ದಾರೆ. ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿಯಲ್ಲಿ ಎಷ್ಟೊಂದು ವ್ಯತ್ಯಾಸವಾಗುತ್ತಿದೆ ಎಂಬುದನ್ನು ನಿಮ್ಮ ಪಾಸ್‌ಬುಕ್‌ನ್ನು ಗಮನಿಸಿದರೆ ಅರಿವಿಗೆ ಬರುತ್ತದೆ. ಡಿಜಿಟಲೀಕರಣದ ಹೆಸರಿನಲ್ಲಿ ಈ ಸರಕಾರ ಮುಗ್ಧ ಜನರಿಗೆ ಮೋಸ ಮಾಡುತ್ತಿದೆ ಎಂಬ ಸಂಶಯ ಮೂಡುತ್ತಿದೆ ಎಂದು ವೆರೋನಿಕಾ ದೂರಿದರು.
ಯುಪಿಎ ಸರಕಾರ ಆಧಾರ್‌ನ್ನು ದೇಶಾದ್ಯಂತ ಜಾರಿಗೊಳಿಸಿದಾಗ, ಆಕಾಶ-ಭೂಮಿ ಒಂದು ಮಾಡಿದ್ದ ಬಿಜೆಪಿ, ಅಧಿಕಾರಕ್ಕೇರಿದ ತಕ್ಷಣ ರಾಗ ಬದಲಿಸಿ, ಪ್ರತಿಯೊಂದನ್ನು ಆಧಾರವನ್ನು ಅನಿವಾರ್ಯಗೊಳಿಸಿಬಿಟ್ಟಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ಅಂದು ಆಡಿದ್ದೆಲ್ಲಾ ಬರೇ ಸುಳ್ಳು ಎಂಬುದನ್ನು ಇದು ಸಾಬೀತು ಪಡಿಸುತ್ತದೆ. ತಾನು ಹೇಳಿದ್ದನ್ನು ಅನುಕರಣೆ ಮಾಡದೇ ಜನರಿಗೆ ಈಗಲೂ ಮಂಕುಬೂದಿ ಎರಚುವಲ್ಲಿ ಮೋದಿ ನಿರತರಾಗಿದ್ದಾರೆ ಎಂದವರು ಆರೋಪಿಸಿದರು.
ಇದೀಗ ನಾವು ದುಡಿದು ಬ್ಯಾಂಕಿನಲ್ಲಿಟ್ಟ ಹಣವನ್ನು ಹಿಂದಕ್ಕೆ ಪಡೆಯಲು ಶುಲ್ಕ ಕಟ್ಟಬೇಕಾದ ವಿಚಿತ್ರ ಪರಿಸ್ಥಿತಿಯನ್ನು ಸರಕಾರ ತಂದಿಟ್ಟಿದೆ. ಕ್ಯಾಶ್‌ಲೆಸ್ ವ್ಯವಹಾರ ಹಾಗೂ ನೋಟುಗಳ ಅಪವೌಲ್ಯೀಕರಣದ ಬಗ್ಗೆ ಮೋದಿ ಅವರ ನಡೆಯ ನಿಜವಾದ ಉದ್ದೇಶದ ಬಗ್ಗೆ ಜನಸಾಮಾನ್ಯರಿಗೀಗ ಗುಮಾನಿ ಹುಟ್ಟಿದೆ ಎಂದು ನುಡಿದರು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಗೋಪಿ ಕೆ.ನಾಯ್ಕೆ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ತಾಪಂ ಸದಸ್ಯೆ ಡಾ.ಸುನೀತಾ ಶೆಟ್ಟಿ, ಸಲಿನಾ ಕರ್ಕಡ, ಜ್ಯೋತಿ ಹೆಬ್ಬಾರ್, ಸರಸು ಡಿ.ಬಂಗೇರ, ಸರಳಾ ಕಾಂಚನ್, ಗೀತಾ ವಾಗ್ಳೆ, ಸುಲೋಚನಾ ಬಂಗೇರ, ಪ್ರಭಾ ಶೆಟ್ಟಿ, ವೀರಾ ಡಿಸೋಜ, ಲಕ್ಷ್ಮೀ ಭಟ್, ಚಂದ್ರಿಕಾ ಕೇಳ್ಕರ್, ಸುಗಂಧಿ ಶೇಖರ್, ವೀರಾ ಡಿಸೋಜ ಅಲ್ಲದೇ ಹರೀಶ್ ಕಿಣಿ, ಜನಾರ್ದನ ಭಂಡಾರಕರ್, ನಾಗೇಶ್ ಉದ್ಯಾವರ, ಅಮೃತ ಶೆಣೈ, ಧೀರಜ್ ಪಟೇಲ್, ಸಂಜಯ್ ಆಚಾರ್ಯ, ದಿನೇಶ್ ಪುತ್ರನ್ ಮುಂತಾದವರು ಭಾಗವಹಿಸಿದ್ದರು.







