ಕಾಸರಗೋಡು: 21ನೆ ದಿನಕ್ಕೆ ಕಾಲಿಟ್ಟ ಜನಪರ ಹೋರಾಟ ಸಮಿತಿ ಧರಣಿ ಸತ್ಯಾಗ್ರಹ

ಕಾಸರಗೋಡು, ಮಾ.2: ಚೆರ್ಕಳ - ಕಲ್ಲಡ್ಕ ರಾಜ್ಯ ಹೆದ್ದಾರಿ ಸೇರಿದಂತೆ ಮಲೆನಾಡು ರಸ್ತೆಗಳ ದುರವಸ್ಥೆಯನ್ನು ಪ್ರತಿಭಟಿಸಿ ಜನಪರ ಹೋರಾಟ ಸಮಿತಿ ನಡೆಸುತ್ತಿರುವ ಬದಿಯಡ್ಕ ಲೋಕೋಪಯೋಗಿ ಇಲಾಖಾ ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ 21ನೆ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ಬದಿಯಡ್ಕದಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದರು.
ರಸ್ತೆ ತಡೆಯನ್ನು ಸಹಕಾರಿ ಧುರೀಣ ಬಾಲಕೃಷ್ಣ ವೊರ್ಕೊಡ್ಲು ಉದ್ಘಾಟಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಮಾಹಿನ್ ಕೇಳೊಟ್ ಅಧ್ಯಕ್ಷತೆ ವಹಿಸಿದ್ದರು.
ಎಣ್ಮಕಜೆ ಪಂಚಾಯತ್ ಮಾಜಿ ಅಧ್ಯಕ್ಷ ಸೋಮಶೇಖರ ಜೆ.ಎಸ್, ಜ್ಞಾನದೇವ್ ಶೆಣೈ, ಅಶ್ರಫ್ ಮುನಿಯೂರು, ಅಲಿ ತೂಪಕಲ್, ಅಲಿ ಮಾವಿನಕಟ್ಟೆ, ನೌಶಾದ್, ಅವಿನಾಶ್ ರೈ, ಅಬ್ದುಲ್ ರಹಮಾನ್ ಮೊದಲಾದವರು ಮಾತನಾಡಿದರು.
ರಸ್ತೆಯ ದುರವಸ್ಥೆ ವಿರುದ್ಧ ಹೋರಾಟ ಸಮಿತಿ ನಾಲ್ಕು ದಿನಗಳ ಹಿಂದೆ ತಿರುವನಂತಪುರದ ರಾಜಭವನ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳು ಗಮನ ನೀಡದಿದ್ದಲ್ಲಿ ಮಾರ್ಚ್ 7 ರಂದು ಮಲೆನಾಡು ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಹರತಾಳ ಹಾಗೂ ಇನ್ನಿತರ ಹೋರಾಟ ನಡೆಸಲಾಗುವುದು ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದರು.







