ಭಾರತಕ್ಕೆ ಮಾದರಿಯಾಗಲಿರುವ ರುವಾಂಡದ ಸ್ವಚ್ಛತಾ ಕಾರ್ಯಕ್ರಮ

ಕಿಗಾಲಿ (ರುವಾಂಡ), ಮಾ. 2: ಆಫ್ರಿಕದ ದೇಶ ರುವಾಂಡದ ‘ಸ್ವಚ್ಛತಾ ಯೋಜನೆ’ಯ ಮಾದರಿಯನ್ನು ಅನುಸರಿಸಲು ಭಾರತ ಮುಂದಾಗಿದೆ. ‘ಸ್ವಚ್ಛ ಭಾರತ’ ಕಾರ್ಯಕ್ರಮವನ್ನು ಮುಂದಕ್ಕೆ ಕೊಂಡೊಯ್ಯಲು ರುವಾಂಡದ ಕಾರ್ಯಕ್ರಮ ಸಹಾಯ ಮಾಡಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಕಿಗಾಲಿಯಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲಾಗಿದೆ ಹಾಗೂ ಈ ನಗರವನ್ನು ಆಫ್ರಿಕದ ಅತ್ಯಂತ ಸ್ವಚ್ಛ ಮತ್ತು ಸುರಕ್ಷಿತ ನಗರ ಎಂಬುದಾಗಿ ಪರಿಗಣಿಸಲಾಗಿದೆ.
ರುವಾಂಡದ ರಾಜಧಾನಿ ಕಿಗಾಲಿಯ ಶೋಭೆಗೆ ಹಸಿರು ಮರಗಳಿಂದ ಕೂಡಿದ ಪರ್ವತಗಳು ಮತ್ತು ಹಸಿರು ಭೂಭಾಗಗಳು ಶೋಭೆ ನೀಡಿವೆ. ಕಿಗಾಲಿಯ ರೀತಿಯಲ್ಲೇ, ಒಮ್ಮೆ ಹಿಂಸಾಪೀಡಿತ ದೇಶವಾಗಿದ್ದ ರುವಾಂಡ ಇಂದು ‘ಆಫ್ರಿಕದ ಹೊಳೆಯುವ ತಾರೆ’ಯಾಗಿ ಪರಿವರ್ತನೆಗೊಂಡಿದೆ.
‘‘ಭಾರತ ರುವಾಂಡದಿಂದ ಕಲಿಯಬೇಕಿರುವುದು ಬೇಕಾದಷ್ಟಿದೆ. ಇದರಲ್ಲಿ ಒಂದು ಸ್ವಚ್ಛತೆ. ‘ಸ್ವಚ್ಛ ಭಾರತ’ ನಮ್ಮ ಪ್ರಮುಖ ಕಾಯಾಕ್ರಮಗಳ ಪೈಕಿ ಒಂದಾಗಿರುವುದರಿಂದ ಈ ಕ್ಷೇತ್ರದಲ್ಲಿ ನಾವು ಅದರೊಂದಿಗೆ ಹೆಚ್ಚು ವ್ಯವಹರಿಸುತ್ತೇವೆ’’ ಎಂದು ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿ ಆರ್ಥಿಕ ಸಂಬಂಧಗಳ ಕಾರ್ಯದರ್ಶಿ ಅಮರ್ ಸಿನ್ಹ ಹೇಳಿದರು.
ರುವಾಂಡ ತನ್ನ ಸಂಘರ್ಷಪೀಡಿತ ಚರಿತ್ರೆಯನ್ನು ಹಿಂದಕ್ಕೆ ಬಿಟ್ಟು ಮುಂದುವರಿದಿರುವುದು ಅದರ ದೊಡ್ಡ ಸಾಧನೆಯಾಗಿದೆ ಎಂದು ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿರುವ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.







