ರೈಲ್ವೇ ಟಿಕೆಟ್ ಕಾಯ್ದಿರಿಸಲು ಆಧಾರ್ ಕಡ್ಡಾಯ

ಹೊಸದಿಲ್ಲಿ, ಮಾ.2: ದಲ್ಲಾಳಿಗಳು ಸಗಟು ಟಿಕೆಟ್ ಕಾಯ್ದಿರಿಸಿ ಬಳಿಕ ಇತರರಿಗೆ ಮಾರಿ ಹಣ ಸಂಪಾದಿಸುವ ಪ್ರಕ್ರಿಯೆಗೆ ಬ್ರೇಕ್ ಹಾಕುವ ಯತ್ನವಾಗಿ ಇನ್ನು ಮುಂದೆ ರೈಲ್ವೇ ಟಿಕೆಟನ್ನು ಆನ್‌ಲೈನ್ ಮುಖಾಂತರ ಕಾಯ್ದಿರಿಸಲು ಆಧಾರ್ ನಂಬರ್ ಕಡ್ಡಾಯವಾಗಲಿದೆ.
2017-18ರ ಹೊಸ ವ್ಯವಹಾರ ಯೋಜನೆಗಳನ್ನು ಪ್ರಕಟಿಸಿದ ರೈಲ್ವೇ ಸಚಿವ ಸುರೇಶ್ ಪ್ರಭು, ನಗದು ರಹಿತ ಟಿಕೆಟ್ ವ್ಯವಸ್ಥೆಯತ್ತ ಸಾಗುವ ಉಪಕ್ರಮವಾಗಿ ರೈಲ್ವೇ ಇಲಾಖೆಯು ದೇಶದಾದ್ಯಂತ 6 ಸಾವಿರ ‘ಪಾಯಿಂಟ್-ಆಫ್ ಸೇಲ್’ ಯಂತ್ರಗಳನ್ನು ಹಾಗೂ 1 ಸಾವಿರ ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳನ್ನು ಅಳವಡಿಸಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ನಗದುರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವ ಸಲುವಾಗಿ ಸಮಗ್ರ ಟಿಕೆಟ್ ಆ್ಯಪ್ ಅನ್ನು ಮೇ ತಿಂಗಳಲ್ಲಿ ಅನಾವರಣವೊಳಿಸಲಾಗುವುದು ಎಂದವರು ತಿಳಿಸಿದರು.ಗಿರಿಧಾಮಗಳನ್ನು ಸಂಪರ್ಕಿಸುವ ಹೊಸ ಪ್ರವಾಸಿ ರೈಲುಗಳ ಆರಂಭ, ಪ್ರಯಾಣಿಕರ ಆರಾಮದಾಯಕ ಪ್ರಯಾಣದ ಸೌಲಭ್ಯಕ್ಕೆ ಒತ್ತು ನೀಡುವುದು, ರೈಲಿನಲ್ಲಿ ಒದಗಿಸುವ ಊಟ-ಉಪಾಹಾದ ಗುಣಮಟ್ಟಕ್ಕೆ ಆದ್ಯತೆ, ಮೂಲಸೌಕರ್ಯ ಒದಗಿಸುವುದು ಮುಂತಾದವು ಹೊಸ ಯೋಜನೆಗಳಲ್ಲಿ ಸೇರಿದೆ.
ರೈಲ್ವೇ ಟಿಕೆಟನ್ನು ಆನ್‌ಲೈನ್ ಮೂಲಕ ಸಗಟು ಬುಕಿಂಗ್ ಮಾಡಿ ಬಳಿಕ ಇವನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ದಲ್ಲಾಳಿಗಳ ಜಾಲವೊಂದು ಸಕ್ರಿಯವಾಗಿದ್ದು ಇದನ್ನು ಮಟ್ಟಹಾಕಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡರೂ ಫಲಪ್ರದವಾಗಿಲ್ಲ. ಈಗ ಟಿಕೆಟ್ ಬುಕಿಂಗ್‌ಗೆ ಆಧಾರ್ ನಂಬರ್ ಕಡ್ಡಾಯಗೊಳಿಸುವ ಮೂಲಕ ಸರಕಾರ ಅವ್ಯವಹಾರ ತಡೆಗಟ್ಟಲು ಮತ್ತೊಂದು ಕ್ರಮಕ್ಕೆ ಮುಂದಾಗಿದೆ.
ರೈಲ್ವೇ ಟಿಕೆಟ್ ಮೇಲೆ ರಿಯಾಯ್ತಿ ಪಡೆಯಲು ಹಿರಿಯ ನಾಗರಿಕರು ಆಧಾರ್ ಕಾರ್ಡ್‌ಗಳನ್ನು ಒದಗಿಸುವುದನ್ನು ಎಪ್ರಿಲ್ 1ರಿಂದ ಕಡ್ಡಾಯಗೊಳಿಸಲಾಗಿದ್ದು ಇದಕ್ಕೆ ಪೂರಕವಾಗಿ 3 ತಿಂಗಳ ಪ್ರಾಯೋಗಿಕ ಕ್ರಿಯೆ ಚಾಲ್ತಿಯಲ್ಲಿದೆ.







