ನಾಮ್ ಹತ್ಯೆ: ಉತ್ತರ ಕೊರಿಯ ವ್ಯಕ್ತಿಯ ಗಡಿಪಾರಿಗೆ ಮಲೇಶ್ಯ ಸಿದ್ಧ

ಕೌಲಾಲಂಪುರ, ಮಾ. 2: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಸಹೋದರ ಕಿಮ್ ಜಾಂಗ್ ನಾಮ್ ಹತ್ಯೆಗೆ ಸಂಬಂಧಿಸಿ ಬಂಧನದಲ್ಲಿರುವ ಉತ್ತರ ಕೊರಿಯದ ವ್ಯಕ್ತಿಯೊಬ್ಬನನ್ನು ಶುಕ್ರವಾರ ಬಿಡುಗಡೆ ಮಾಡಿ ಗಡಿಪಾರು ಮಾಡಲಾಗುವುದು ಎಂದು ಮಲೇಶ್ಯದ ಅಟಾರ್ನಿ ಜನರಲ್ ಮುಹಮ್ಮದ್ ಅಪಂಡಿ ಗುರುವಾರ ಹೇಳಿದ್ದಾರೆ.
ಫೆಬ್ರವರಿ 13ರಂದು ಕಿಮ್ ಜಾಂಗ್ ನಾಮ್‌ರನ್ನು ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಮಾರಣಾಂತಿಕ ರಾಸಾಯನಿಕ ಪ್ರಯೋಗ ಮಾಡಿ ಕೊಂದಿದ್ದರು. ಹತ್ಯೆಯ ನಾಲ್ಕು ದಿನಗಳ ಬಳಿಕ ಉತ್ತರ ಕೊರಿಯದ ರಿ ಜೊಂಗ್ ಚೋಲ್ ಎಂಬಾತನನ್ನು ಬಂಧಿಸಲಾಗಿತ್ತು. ಆತನ ವಿರುದ್ಧ ದೋಷಾರೋಪ ಹೊರಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಅಟಾರ್ನಿ ಜನರಲ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಓರ್ವ ಇಂಡೋನೇಶ್ಯ ಹಾಗೂ ಓರ್ವ ವಿಯೆಟ್ನಾಮ್‌ನ ಮಹಿಳೆಯರ ವಿರುದ್ಧ ಮಲೇಶ್ಯ ಈಗಾಗಲೇ ಕೊಲೆ ಆರೋಪವನ್ನು ಹೊರಿಸಿದೆ.
ಅದೇ ವೇಳೆ, ಕೌಲಾಲಂಪುರದಲ್ಲಿರುವ ಉತ್ತರ ಕೊರಿಯದ ರಾಯಭಾರ ಕಚೇರಿಯಲ್ಲಿರುವ ಓರ್ವ ಹಿರಿಯ ಅಧಿಕಾರಿ ಸೇರಿದಂತೆ ಇತರ ಏಳು ಉತ್ತರ ಕೊರಿಯನ್ನರನ್ನು ವಿಚಾರಣೆಗೆ ಒಳಪಡಿಸುವುದನ್ನು ಪೊಲೀಸರು ಎದುರು ನೋಡುತ್ತಿದ್ದಾರೆ.
ಇನ್ನು ಉತ್ತರ ಕೊರಿಯನ್ನರಿಗೆ ವೀಸಾ ಇಲ್ಲದೆ ಮಲೇಶ್ಯ ಪ್ರವೇಶವಿಲ್ಲ
ಉತ್ತರ ಕೊರಿಯನ್ನರು ವೀಸಾ ಇಲ್ಲದೆ ಮಲೇಶ್ಯ ಪ್ರವೇಶಿಸುವ ಸೌಲಭ್ಯವನ್ನು ಮಲೇಶ್ಯ ಮಾರ್ಚ್ 6ರಿಂದ ರದ್ದುಗೊಳಿಸಲಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಬರ್ನಾಮ’ ಗುರುವಾರ ವರದಿ ಮಾಡಿದೆ.
ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಕಿಮ್ ಜಾಂಗ್ ನಾಮ್ ಹತ್ಯೆ ನಡೆದ ಬಳಿಕ ಎರಡು ದೇಶಗಳ ಸಂಬಂಧ ಹದಗೆಡುತ್ತಿರುವಂತೆಯೇ ಈ ಬೆಳವಣಿಗೆ ಸಂಭವಿಸಿದೆ.
ಉತ್ತರ ಕೊರಿಯನ್ನರು ವೀಸಾ ಇಲ್ಲದೆ ಮಲೇಶ್ಯ ಪ್ರವೇಶಿಸಬಹುದಾಗಿದೆ. ಇದಕ್ಕೆ ಪ್ರತಿಯಾಗಿ ಮಲೇಶ್ಯನ್ನರೂ ಉತ್ತರ ಕೊರಿಯಕ್ಕೆ ವೀಸಾ ಇಲ್ಲದೆ ಪ್ರವೇಶಿಸಬಹುದಾಗಿತ್ತು.







