ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ : ರಾಜದೀಪ್ ಸರ್ದೇಸಾಯಿ

ಹೊಸದಿಲ್ಲಿ, ಮಾ. 2 : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಏಳು ಹಂತಗಳ ಪೈಕಿ ಐದು ಹಂತಗಳ ಮತದಾನ ಮುಕ್ತಾಯವಾಗಿರುವ ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಇರುವ ಮತದಾರರ ಒಲವು, ನಿಲುವುಗಳನ್ನು ಗಮನಿಸಿದರೆ ಬಿಜೆಪಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚು ಕಂಡು ಬರುತ್ತಿದೆ ಎಂದು ಹಲವಾರು ಚುನಾವಣಾ ಸಮೀಕ್ಷೆಗಳನ್ನು ನಡೆಸಿರುವ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರು ಹಿಂದೂಸ್ತಾನ್ ಟೈಮ್ಸ್ ನಲ್ಲಿ ಬರೆದ ಲೇಖನದಲ್ಲಿ ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದ್ದಂತಹ ಅಲೆ ಈ ಬಾರಿ ಯಾವುದೇ ಪಕ್ಷದ ಪರ ಇಲ್ಲ. ಎಲ್ಲ 403 ಕ್ಷೇತ್ರಗಳಲ್ಲೂ ಭಾರೀ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿದೆ. ಆದರೂ ರಾಜ್ಯಾದ್ಯಂತ ಮತದಾರರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡರೆ ಈ ಬಾರಿ ದೇಶದ ಅತಿದೊಡ್ಡ ರಾಜ್ಯದಲ್ಲಿ ಕಮಲ ಅರಳುವುದು ಬಹುತೇಕ ನಿಶ್ಚಿತ ಎಂದು ರಾಜದೀಪ್ ಅಭಿಪ್ರಾಯಪಟ್ಟಿದ್ದಾರೆ.
2012 ರಲ್ಲಿ 29% ಮತಗಳಿಸಿದ ಎಸ್ಪಿ ಹಾಗು 2007 ರಲ್ಲಿ 30% ಮತಗಳಿಸಿದ್ದ ಬಿಎಸ್ಪಿ ಅಧಿಕಾರಕ್ಕೇರಿದ್ದವು. 2014 ರಲ್ಲಿ 42% ಮತ ಗಳಿಸಿ 80 ರಲ್ಲಿ 73 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಅದರಲ್ಲಿ 10% ದಷ್ಟು ಭಾರೀ ಮತ ಕಡಿತವಾದರೂ ಮುಂಚೂಣಿ ಸ್ಥಾನದಲ್ಲೇ ಇರುತ್ತದೆ ಎಂಬುದು ರಾಜದೀಪ್ ವಾದ.
ಬಿಹಾರದಂತೆ ಬಿಜೆಪಿಯೇತರ ಎಲ್ಲ ಶಕ್ತಿಗಳ ಮಹಾಮೈತ್ರಿ ಉತ್ತರ ಪ್ರದೇಶದಲ್ಲಿ ಇಲ್ಲದಿರುವುದು, ಇಲ್ಲಿ ಎಸ್ಪಿ, ಬಿಎಸ್ಪಿ ಹಾಗು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿರುವುದು, ಕಾಂಗ್ರೆಸ್ ಅತ್ಯಂತ ದುರ್ಬಲವಾಗಿರುವುದು, ಎಲ್ಲ ವೈಫಲ್ಯಗಳ ಹಾಗು ಭರವಸೆಗಳನ್ನು ಈಡೇರಿಸದ ಹೊರತಾಗಿಯೂ ಜನರಿಗೆ ಮೋದಿ ಮೇಲಿನ ಮೋಹ ಇನ್ನೂ ಸಂಪೂರ್ಣ ಕಡಿಮೆಯಾಗದಿರುವುದು, ಬಿಜೆಪಿ ಹಿಂದುತ್ವ ಅಂಶವನ್ನು ಎತ್ತಿ ಹಿಡಿದು ಕೋಮು ಧ್ರುವೀಕರಣ ಮಾಡುವಲ್ಲಿ ಯಶಸ್ವಿಯಾಗಿರುವುದು, ಯಾದವ - ಮುಸ್ಲಿಮರ ಮತಗಳು ಸಾರಾಸಗಟಾಗಿ ಎಸ್ಪಿ - ಕಾಂಗ್ರೆಸ್ ಕೂಟಕ್ಕೆ ಹೋಗುತ್ತವೆ ಎಂಬ ಅಂಶವನ್ನು ತೋರಿಸಿ ಹಿಂದೂ ಮತಗಳ ಧ್ರುವೀಕರಣ ನಡೆಯುತ್ತಿರುವುದು, ಗ್ರಾಮೀಣ ಭಾಗಗಳಲ್ಲಿ ಅಖಿಲೇಶ್ ಸರ್ಕಾರದ ಕೆಲಸಗಳು ಅಷ್ಟಾಗಿ ಕಾಣದೇ ಇರುವುದು ಇತ್ಯಾದಿಗಳು ಬಿಜೆಪಿ ಪಾಲಿಗೆ ವರವಾಗಲಿವೆ ಎಂದು ರಾಜದೀಪ್ ಅಭಿಪ್ರಾಯಪಟ್ಟಿದ್ದಾರೆ.
ನಾವು ಈಗಾಗಲೇ ಎಸ್ಪಿ, ಬಿಎಸ್ಪಿಗೆ ಅವಕಾಶ ನೀಡಿದ್ದೇವೆ, ಈ ಬಾರಿ ಮೋದಿಜೀ ಗೆ ಅವಕಾಶ ನೀಡಿ ನೋಡೋಣ ಎಂಬ ಭಾವನೆ ಜನರಲ್ಲಿರುವುದು, ನೋಟು ರದ್ದತಿಯಿಂದ ಸಂಕಷ್ಟಕ್ಕೆ ಈಡಾದವರೂ ಮೋದಿಗೆ ಮತ ನೀಡುತ್ತೇವೆ ಎಂದು ಹೇಳುತ್ತಿರುವುದು ಬಿಜೆಪಿಗೆ ಅನುಕೂಲಕರವಾಗಲಿವೆ ಎಂದು ರಾಜದೀಪ್ ತಮ್ಮ ವಿಶ್ಲೇಷಣೆಯಲ್ಲಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಆರನೇ ಹಂತದ ಮತದಾನ ಮಾರ್ಚ್ 4 ರಂದು ಹಾಗು ಕೊನೆಯ ಹಾಗು ಏಳನೇ ಹಂತದ ಮತದಾನ ಮಾರ್ಚ್ 8 ರಂದು ನಡೆಯಲಿದೆ. ಮತ ಎಣಿಕೆ ಮಾರ್ಚ್ 11 ರಂದು ನಡೆಯಲಿದೆ.







