ಯೋಧ ತೇಜ್ ಬಹದೂರ್ ಹೊಸ ವಿಡಿಯೋದಲ್ಲಿ ಕಿರುಕುಳದ ಆರೋಪ

ಹೊಸದಿಲ್ಲಿ,ಮಾ.2: ಯೋಧರಿಗೆ ಕಳಪೆ ಆಹಾರವನ್ನು ಒದಗಿಸಲಾಗುತ್ತಿದೆ ಎಂದು ದೂರಿಕೊಂಡು ವೀಡಿಯೊಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಭಾರೀ ವಿವಾದವನ್ನು ಸೃಷ್ಟಿಸಿದ್ದ ಬಿಎಸ್‌ಎಫ್ ಯೋಧ ತೇಜ್ ಬಹದೂರ್ ಯಾದವ ಅವರು ಹೊಸ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಈ ಬಾರಿ ಪಡೆಯಲ್ಲಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹೊಸ ವೀಡಿಯೊ ಕೇಂದ್ರ ಗೃಹ ಸಚಿವಾಲಯವು ಸಹನೆಯನ್ನು ಕಳೆದುಕೊಳ್ಳಲು ಕಾರಣವಾಗಿರುವಂತಿದೆ. ಯಾದವ ವಿರುದ್ಧ ಸೇವೆಯಿಂದ ವಜಾದಂತಹ ಕ್ರಮಗಳನ್ನು ಕೈಗೊಳ್ಳಲು ಅದು ಚಿಂತನೆ ನಡೆಸುತ್ತಿದೆ. ಸಾರ್ವಜನಿಕ ಅಭಿಪ್ರಾಯವು ಯಾದವ ಪರವಾಗಿದೆ ಮತ್ತು ಅವರನ್ನು ಸೇವೆಯಿಂದ ವಜಾಗೊಳಿಸಿದರೆ ಅದು ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಬಹುದು ಎಂದು ಸಚಿವಾಲಯವು ಭಾವಿಸಿದೆಯಾದರೂ ಶಿಸ್ತನ್ನು ಪದೇಪದೇ ಉಲ್ಲಂಘಿಸಲು ಯಾದವಗೆ ಅವಕಾಸ ನೀಡುವುದು ಪಡೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು ಎನ್ನುವುದನ್ನೂ ಅದು ಮರೆತಿಲ್ಲ.
ಸ್ವರಾಜ್ ಸಮಾಚಾರ್‌ನ ಫೇಸಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿರುವ ವೀಡಿಯೊದಲ್ಲಿ ತನ್ನ ಮೊಬೈಲ್‌ನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ ಮತ್ತು ತನಗೆ ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ ಎಂದು ಯಾದವ ಆಪಾದಿಸಿದ್ದಾರೆ.
‘‘ದೇಶದಲ್ಲಿ ಭ್ರಷ್ಟಾಚಾರ ಕೊನೆಗೊಳ್ಳಬೇಕೆಂದು ಪ್ರಧಾನಿ ಬಯಸುತ್ತಿದ್ದಾರೆ. ನಾನು ನನ್ನ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಲು ಬಯಸಿದ್ದೇನೆ ’’ ಎಂದು ಯಾದವ ಹೇಳಿದ್ದಾರೆ.
ವೀಡಿಯೊದಲ್ಲಿರುವ ವ್ಯಕ್ತಿ ಯಾದವ ಎನ್ನುವುದನ್ನು ದಿಲ್ಲಿಯಲ್ಲಿರುವ ಬಿಎಸ್‌ಎಫ್ ಕಚೇರಿಯು ದೃಢಪಡಿಸಿದೆ. ಯಾದವ ಪತ್ನಿ ಫೆಬ್ರವರಿ ಮೂರನೇ ವಾರದಲ್ಲಿ ಅವರನ್ನು ಭೇಟಿಯಾದಾಗ ಈ ವೀಡಿಯೊವನ್ನು ಚಿತ್ರೀಕರಿಸಿದಂತಿದೆ. ಪ್ರಕರಣದಲ್ಲಿ ಸಾಕ್ಷಾಧಾರವಾ ಗಿರುವುದರಿಂದ ಅವರ ಮೊಬೈಲ್‌ನ್ನು ಪಡೆಯು ವಶಪಡಿಸಿಕೊಂಡಿದೆ ಎಂದು ಬಿಎಸ್‌ಎಫ್ ಅಧಿಕಾರಿಯೋರ್ವರು ತಿಳಿಸಿದರು.
ತನಗೆ ಪಾಕಿಸ್ತಾನಿ ನಂಟುಗಳಿವೆ ಎನ್ನುವುದನ್ನು ತೋರಿಸಲು ತನ್ನ ಮೊಬೈಲ್ ಫೋನ್‌ನಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದೂ ಯಾದವ ಹೊಸ ವೀಡಿಯೊದಲ್ಲಿ ದೂರಿದ್ದಾರೆ.
ನಾವು ಬಿಎಸ್‌ಎಫ್‌ನ ದೈನಂದಿನ ವ್ಯವಹಾರಗಳಲ್ಲಿ ಮೂಗು ತೂರಿಸುವುದಿಲ್ಲ. ಅದರ ಉಸ್ತುವಾರಿ ಬಿಎಸ್‌ಎಫ್ ಮಹಾ ನಿರ್ದೇಶಕ (ಡಿಜಿ)ರ ವಿಶಿಷ್ಟಾಧಿಕಾರವಾಗಿದೆ. ಆದರೆ ನಾನೇ ಡಿಜಿಯಾಗಿದ್ದರೆ ನಿರಂತರವಾಗಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದಕ್ಕಾಗಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿರುವುದಕ್ಕಾಗಿ ಯಾದವ ವಜಾಕ್ಕೆ ಶಿಫಾರಸು ಮಾಡುತ್ತಿದ್ದೆ. ಪದೇ ಪದೇ ಶಿಸ್ತನ್ನು ಉಲ್ಲಂಘಿಸುವಂತಿಲ್ಲ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ಹೇಳಿದರು. ಬಿಎಸ್‌ಎಫ್ ಸೇರಿದಂತೆ ಎಲ್ಲ ಅರೆ ಮಿಲಿಟರಿ ಪಡೆಗಳು ಈ ಅಧಿಕಾರಿಗೆ ವರದಿ ಮಾಡಿಕೊಳ್ಳುತ್ತವೆ.
ಡಿಜಿಯಿಂದ ಗೃಹ ಕಾರ್ಯದರ್ಶಿಯವರೆಗೆ ಎಲ್ಲರೂ ಯಾದವರ ಶತ್ರುಗಳಾಗಲು ಸಾಧ್ಯವಿಲ್ಲ. ಮೊದಲ ವೀಡಿಯೊದ ಬಳಿಕ ನಾವು ಅವರೊಡನೆ ಚರ್ಚಿಸಿದ್ದೆವು. ಆದರೂ ಅವರು ಸಾರ್ವಜನಿಕವಾಗಿ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಪಡೆಯಲ್ಲಿ ಶಿಸ್ತು ಎಲ್ಲಕ್ಕಿಂತ ಮುಖ್ಯವಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೋರ್ವರು ಹೇಳಿದರು.
ಎಲ್ಲ ಅರೆ ಸೇನಾಪಡೆಗಳಲ್ಲಿ ಸ್ಮಾರ್ಟ್ ಫೋನ್ ಬಳಕೆಯನ್ನು ನಿಷೇಧಿಸಲು ಸಹ ಗೃಹ ಸಚಿವಾಲಯವು ಪರಿಶೀಲನೆ ನಡೆಸುತ್ತಿದೆ. ಯಾದವ ತನ್ನ ಮೊದಲ ವೀಡಿಯೊ ಚಿತ್ರೀಕರಿಸಲು ಸ್ಮಾರ್ಟ್ ಫೋನ್ ಬಳಸಿದ್ದರು.
ನನ್ನ ಫೋನ್ ದುರುಪಯೋಗವಾಗುತ್ತಿದೆ ಎಂದು ನನಗೆ ಗೊತ್ತಾಗಿದೆ. ಯೋಧರಿಗೆ ಕಳಪೆ ಅಹಾರ ಪೂರೈಕೆ ಕುರಿತ ನನ್ನ ವೀಡಿಯೊ ಅಸಲಿ ಎಂದು ಪ್ರಧಾನಿಯವರಿಗೆ ತಿಳಿಸಲು ನಾನು ಬಯಸಿದ್ದೇನೆ. ಈಗ ನನಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ...
ತೇಜ ಬಹಾದೂರ ಯಾದವ
ಯಾದವರ ಫೇಸ್‌ಬುಕ್ ಪೇಜ್ ಅವರ ಸ್ನೇಹಿತರ ಪಟ್ಟಿಯಲ್ಲಿ ಕೆಲವು ಪಾಕಿಸ್ತಾನಿಗಳ ಹೆಸರುಗಳನ್ನು ತೋರಿಸುತ್ತಿದೆ. ಯಾರಾದರೂ ಅವರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರೇ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಪಾಕಿಸ್ತಾನಿ ಏಜಂಟ್‌ಗಳು ನಮ್ಮ ಯೋಧರನ್ನು ಹನಿ-ಟ್ರಾಪ್‌ನಲ್ಲಿ ಸಿಲುಕಿಸಿ ಬಳಿಕ ಅವರನ್ನು ತಾವು ಹೇಳಿದ್ದನ್ನು ಮಾಡುವಂತೆ ಬಲಾತ್ಕರಿಸುವ ಘಟನೆಗಳು ಹೊಸದೇನಲ್ಲ. ಹೀಗಾಗಿ ನಾವು ತನಿಖೆ ನಡೆಸಲೇಬೇಕಿದೆ.
ಬಿಎಸ್‌ಎಫ್ ಅಧಿಕಾರಿ







