ಗಂಗೊಳ್ಳಿ: ಮನೆಗೆ ನುಗ್ಗಿ ಲಕ್ಷಾಂತರ ರೂ.ಸೊತ್ತು ಕಳವು

ಗಂಗೊಳ್ಳಿ, ಮಾ.2: ಮನೆಯವರೆಲ್ಲಾ ಸಮೀಪದಲ್ಲಿ ನಡೆಯುತಿದ್ದ ನಾಗಮಂಡಲೋತ್ಸವಕ್ಕೆ ಹೋಗಿದ್ದ ಸಮಯವನ್ನು ನೋಡಿಕೊಂಡು ಕಳ್ಳರು ಮನೆಯನ್ನು ಪ್ರವೇಶಿಸಿ ಸುಮಾರು ಒಂದೂವರೆ ಲಕ್ಷ ರೂ.ವೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿರುವ ಘಟನೆ ನೂಜಾಡಿ ಗ್ರಾಮದ ಬಗ್ವಾಡಿ ಕ್ರಾಸ್ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಇಲ್ಲಿನ ಜಯಲಕ್ಷ್ಮೀ ಶಶಿಧರ ದೇವಾಡಿಗ ಅವರ ಮನೆಯವರು ಅಲ್ಲೇ ಪಕ್ಕದಲ್ಲಿ ನಡೆಯುತಿದ್ದ ನಾಗಮಂಡಲೋತ್ಸವ ಕಾರ್ಯಕ್ರಮವನ್ನು ವೀಕ್ಷಿಸಲು ರಾತ್ರಿ 8:30ರ ಸುಮಾರಿಗೆ ಹೋಗಿದ್ದು, 10:45ರ ಸುಮಾರಿಗೆ ಜಯಲಕ್ಷ್ಮೀ ತಂದೆಯವರು ಮನೆಗೆ ಮರಳಿ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಬೀಗ ಮುರಿದ ಕಳ್ಳರು ಮನೆಯೊಳಗೆ ಪ್ರವೇಶಿಸಿ ಗೋದ್ರೇಜ್‌ನಲ್ಲಿಟ್ಟಿದ್ದ 7 ಪವನ್ ಚಿನ್ನದ ಒಡವೆಗಳನ್ನು ಹಾಗೂ 1,400ರೂ. ನಗದನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಜಯಲಕ್ಷ್ಮೀ ದೇವಾಡಿಗ ಗಂಗೊಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.





