ಉಡುಪಿ: ಮೀನುಗಾರಿಕಾ ಇಲಾಖೆಗೆ 596.51ಲಕ್ಷ ರೂ. ಅನುದಾನ ಬಿಡುಗಡೆ

ಉಡುಪಿ, ಮಾ.2: 2016-17ನೇ ಸಾಲಿನಲ್ಲಿ ಮೀನುಗಾರರು ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆದ ಸಾಲದ ಮೇಲಿನ ಶೇ.2ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಾವತಿಸುವ ಯೋಜನೆಯಲ್ಲಿ ಒಂದು ಕೋಟಿ ರೂ.ಗಳನ್ನು ಮೀನುಗಾರರ ಪರವಾಗಿ ಬ್ಯಾಂಕ್‌ಗಳಿಗೆ ಪಾವತಿಸಲಾಗಿದೆ. ಅಲ್ಲದೇ ಸರಕಾರದಿಂದ ಪುನಹ 596.51ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.
ಮೀನುಗಾರಿಕೆ ದೋಣಿಗಳಿಗೆ ಡೀಸೆಲ್ ಮಾರಾಟ ತೆರಿಗೆ ಮರುಪಾವತಿ ಯೋಜನೆಯಡಿ 95.52 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈವರೆಗೆ 95.23 ಕೋಟಿ ರೂ. ಸಹಾಯಧನವನ್ನು ಮೀನುಗಾರರಿಗೆ ಪಾವತಿ ಮಾಡಲಾಗಿದೆ. ಅಲ್ಲದೆ ಸರಕಾರದಿಂದ ಹೆಚ್ಚುವರಿಯಾಗಿ 20 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ ಮೀನುಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.
ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಬ್ರೇಕ್‌ವಾಟರ್ ಕಾಮಗಾರಿಯನ್ನು ಒಟ್ಟು 102.11ಕೋಟಿ ರೂ.ವೆಚ್ಚದಲ್ಲಿ ಹಮ್ಮಿಕೊಂಡಿದ್ದು, ಇದರಲ್ಲಿ ಕೇಂದ್ರ ಸರಕಾರದ ಶೇ.75 ಅಂದರೆ 76.58 ಕೋಟಿ ರೂ. ಹಾಗೂ ರಾಜ್ಯ ಸರಕಾರದ ಶೇ.25 ಭಾಗ ಅಂದರೆ 25.52 ಕೋಟಿ ರೂ. ಅನುದಾನದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ.
2016-17ನೇ ಸಾಲಿನಲ್ಲಿ ಪ್ರಥಮ ಕಂತಾಗಿ ಕೇಂದ್ರ ಸರಕಾರದಿಂದ 3ಕೋಟಿ ರೂ. ಹಾಗೂ ರಾಜ್ಯ ಸರಕಾರದಿಂದ ಒಂದು ಕೋಟಿ ರೂ. ಒಟ್ಟು 4 ಕೋಟಿ ರೂ. ಬಿಡುಗಡೆಯಾಗಿದ್ದು, ಇದನ್ನು ಸಂಪೂರ್ಣ ವಿನಿಯೋಗಿಸಲಾಗಿದೆ. ದ್ವಿತೀಯ ಕಂತಿನ ಅನುದಾನ 10 ಕೋಟಿ ರೂ.ವನ್ನು ಸಾಗರಮಾಲ ಯೋಜನೆಯಡಿ ಬಿಡುಗಡೆಗೊಳಿಸುವುದಾಗಿ ಕೇಂದ್ರ ಶಿಪ್ಪಿಂಗ್ ಸಚಿವಾಲಯ ತಿಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.







