ವೇತನ ಹೆಚ್ಚಳ ವಿಚಾರ: ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿ ಅಸಮಾಧಾನ
ಹೊಸದಿಲ್ಲಿ, ಮಾ.2: ವೇತನವನ್ನು 25 ಶೇ. ಹೆಚ್ಚಿಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಪ್ರಸ್ತಾವವನ್ನು ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿ ತಿರಸ್ಕರಿಸಿದ್ದಾರೆ.
ಕಳೆದ ವರ್ಷ ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಸಹಾಯಕ ಸಿಬ್ಬಂದಿ ಕಾರ್ಯದರ್ಶಿ ಅಜಯ್ ಶಿರ್ಕೆ ಹಾಗೂ ಅಧ್ಯಕ್ಷ ಅನುರಾಗ್ ಠಾಕೂರ್‌ರನ್ನು ಭೇಟಿಯಾಗಿ 100 ಶೇ. ವೇತನ ಹೆಚ್ಚಳ ಪ್ರಸ್ತಾವ ಇಡಲಾಗಿತ್ತು. ಅದಕ್ಕೆ ಅವರು ಪರಿಶೀಲಿಸುವ ಭರವಸೆ ನೀಡಿದ್ದರು. ಜನವರಿಯಲ್ಲಿ ಸುಪ್ರೀಂಕೋರ್ಟ್ ಠಾಕೂರ್ ಹಾಗೂ ಶಿರ್ಕೆಯವರನ್ನು ಹುದ್ದೆಯಿಂದ ಉಚ್ಚಾಟಿಸಿದ ಬಳಿಕ ವಿಷಯ ನೆನಗುದಿಗೆ ಬಿದ್ದಿತ್ತು. ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಪರಿಷ್ಕೃತ ವೇತನದ ಹೊಸ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಇದು ಸಹಾಯಕ ಸಿಬ್ಬಂದಿಯ ನಿರೀಕ್ಷೆಗಿಂತ ತುಂಬಾ ಕಡಿಮೆಯಾಗಿದೆ.
ಕಳೆದ ಮೂರು ವರ್ಷಗಳಿಂದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜಯ್ ಬಂಗಾರ್ ವೇತನದಲ್ಲಿ ಹೆಚ್ಚಳವಾಗಿಲ್ಲ. ಇತ್ತೀಚೆಗೆ ಸೇರ್ಪಡೆಯಾಗಿರುವ ಫಿಸಿಯೋಗೆ ನೀಡುತ್ತಿರುವ ವೇತನ ಇಬ್ಬರು ಕೋಚ್‌ಗಳಿಗೆ ಸಮನಾಗಿದೆ. ಈ ವಿಷಯದಲ್ಲಿ ತಾರತಮ್ಯವಾಗಿದೆ. ಭಾರತೀಯ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ಸಹಾಯಕ ಸಿಬ್ಬಂದಿ ಯ ವೇತನ ಹೆಚ್ಚಳದ ಪರವಾಗಿದ್ದಾರೆ. ಬಿಸಿಸಿಐ ವೇತನ ಹೆಚ್ಚಳ ಮಾಡಲಿದೆ ಎಂದು ಅವರು ಭರವಸೆ ನೀಡಿದ್ದರು. ಆದರೆ ಈ ವರೆಗೆ ಇದು ಆಗಿಲ್ಲ. ಇದೀಗ 25 ಶೇ. ವೇತನ ಹೆಚ್ಚಳದಿಂದ ಎಲ್ಲರಿಗೂ ಅತೃಪ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಕುಂಬ್ಳೆ ವಾರ್ಷಿಕ ವೇತನ 6.5 ಕೋಟಿ ರೂ. ಪಡೆಯುತ್ತಿದ್ದಾರೆ. ಆದರೆ, ಬ್ಯಾಟಿಂಗ್ ಕೋಚ್ ಬಂಗಾರ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ವೇತನ ಇನ್ನೂ ಹೆಚ್ಚಳವಾಗಿಲ್ಲ. ಹೀಗಾಗಿ ವೇತನ ವಿಚಾರ ಮತ್ತೊಮ್ಮೆ ಆಡಳಿತಾಧಿಕಾರಿಗಳ ಸಮಿತಿ ಮುಂದೆ ಬರುವ ಸಾಧ್ಯತೆಯಿದೆ.







