ನವಜಾತ ಶಿಶುಗಳ ಸುರಕ್ಷತೆ: ಅಮೆರಿಕಕ್ಕೆ ಸಮನಾದ ಸಾಧನೆ ಮಾಡಿದ ಕೇರಳ
ತಿರುವನಂತಪುರ, ಮಾ.3: ನವಜಾತ ಶಿಶು ಸುರಕ್ಷೆ ವಿಚಾರದಲ್ಲಿ ಕೇರಳ ಅಪೂರ್ವ ಸಾಧನೆ ಮಾಡಿದ್ದು, ಅಮೆರಿಕದ ಮಟ್ಟದಲ್ಲಿ ಈ ಸಾಧನೆ ಮಾಡಿರುವುದು ಇಡೀ ವಿಶ್ವದ ಗಮನ ಸೆಳೆದಿದೆ.
ಹುಟ್ಟುವ ಪ್ರತಿ 1000 ನವಜಾತ ಶಿಶುಗಳ ಪೈಕಿ ಒಂದು ವರ್ಷದೊಳಗೆ ಮೃತಪಡುವ ಮಕ್ಕಳ ಸಂಖ್ಯೆ 6ಕ್ಕಿಂತ ಕಡಿಮೆ ಇರುವುದು ಕೇರಳದ ಹೆಗ್ಗಳಿಕೆ. ಶ್ರೀಮಂತ ದೇಶಗಳ ಮಟ್ಟದ ಸಾಧನೆಯನ್ನು ಕೇರಳ ಮಾಡಿದೆ ಎಂದು 2015-16ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಪಡಿಸಿದೆ.
2009ರ ನಂತರ ಸಾವಿರಕ್ಕೆ 12ರಷ್ಟಿದ್ದ ಈ ಶಿಶು ಮರಣ ಪ್ರಮಾಣವನ್ನು ಒಂದಂಕಿಗೆ ಇಳಿಸಲು ಕೇರಳ ಸರಕಾರ ಹರಸಾಹಸ ಮಾಡಿತ್ತು ಎಂದು ಸಮೀಕ್ಷೆ ನಡೆಸಿದ್ದ ಸ್ಯಾಂಪಲ್ ರೆಜಿಸ್ಟ್ರೇಷನ್ ಸರ್ವೇ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. 2005-06ರಲ್ಲಿ ನಡೆದ ಎನ್‌ಎಫ್‌ಎಚ್‌ಎಸ್‌ನಲ್ಲಿ ಕೇರಳದ ಶಿಶುಮರಣ ಪ್ರಮಾಣ ಸಾವಿರಕ್ಕೆ 15ರಷ್ಟಿತ್ತು. ರಷ್ಯಾ (8), ಚೀನಾ (9), ಶ್ರೀಲಂಕಾ (8) ಹಾಗೂ ಬ್ರೆಜಿಲ್ (15) ದೇಶಗಳಿಗಿಂತಲೂ ಕಡಿಮೆ ಶಿಶುಮರಣ ಪ್ರಮಾಣ ದಾಖಲಾಗಿದೆ.
ಈ ಕ್ರಮಗಳಲ್ಲಿ ದೇಶದ ಇತರ ಎಲ್ಲ ರಾಜ್ಯಗಳಿಗಿಂತ ಕೇರಳ ಮುಂದಿದೆ. ತಮಿಳುನಾಡಿನಲ್ಲಿ ಈ ಪ್ರಮಾಣ 21 ಇದೆ. ಕಳೆದ ಕೆಲ ವರ್ಷಗಳಲ್ಲಿ ಈ ಪ್ರಮಾಣ 10ಕ್ಕಿಂತ ಕಡಿಮೆ ಇಳಿದಿದ್ದರೂ, 6ಕ್ಕೆ ತಲುಪಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಶಿಶು ಮರಣ ಪ್ರಮಾಣದಲ್ಲಿ ಶೇಕಡ 60ಕ್ಕಿಂತಲೂ ಹೆಚ್ಚು ಶಿಶುಗಳು 28 ದಿನದೊಳಗೆ ಸಾಯುತ್ತಿವೆ. ಇದಕ್ಕೆ ಅವಧಿಪೂರ್ವ ಪ್ರಸವ, ಕಡಿಮೆ ತೂಕ ಹಾಗೂ ಹುಟ್ಟುವ ವೇಳೆಯೇ ದೋಷ ಇರುವುದು ಕಾರಣ ಎಂದು ಹೇಳಲಾಗಿದೆ.