ಚಿತ್ರನಿರ್ಮಾಪಕ ಮಹೇಶ್ ಭಟ್‌ಗೆ ಬೆದರಿಕೆ ಕರೆ ಮಾಡಿದಾತನ ಸೆರೆ

ಮುಂಬೈ,ಮಾ.3: ಹಫ್ತಾಕ್ಕಾಗಿ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬರುತ್ತಿದೆ ಎಂದು ಬಾಲಿವುಡ್ ಚಿತ್ರ ನಿರ್ಮಾಪಕ-ನಿರ್ದೇಶಕ ಮಹೇಶ್ ಭಟ್ ದೂರು ದಾಖಲಿಸಿದ 12 ಗಂಟೆಗಳಲ್ಲಿ ಸಿಟಿ ಕ್ರೈಂ ಬ್ರಾಂಚ್‌ನ ಆ್ಯಂಟಿ ಎಕ್ಸ್‌ಟಾರ್ಶನ್ ಸೆಲ್ ಲಕ್ನೋದಲ್ಲಿ ಓರ್ವ ಯುವಕನನ್ನು ಬಂಧಿಸಿದೆ.
ಬಂಧಿತ ಯುವಕ 24ರ ಪ್ರಾಯದ ಸಂದೀಪ್ ಸಾಹು ಎಂದು ಗುರುತಿಸಲಾಗಿದ್ದು ಈತ ಕೆಲಸವಿಲ್ಲದೇ ಅಲೆದಾಡುತ್ತಿದ್ದ. ತಾನು ಭೂಗತ ಪಾತಕಿ ಬಬ್ಲೂ ಶ್ರೀವಾಸ್ತವನೆಂದು ಹೇಳಿಕೊಂಡು ಮಹೇಶ್ ಭಟ್‌ಗೆ ಕರೆ ಮಾಡಿದ್ದ ಸಾಹು 50 ಲಕ್ಷ ರೂ. ಹಫ್ತಾ ನೀಡುವಂತೆ ಕೇಳಿದ್ದ. ಹಫ್ತಾ ನೀಡಲು ವಿಫಲರಾದರೆ ಭಟ್‌ರ ಪತ್ನಿ ಸೋನಿ ಹಾಗೂ ಪುತ್ರಿ ಅಲಿಯಾ ಭಟ್‌ರನ್ನು ಹತ್ಯೆಗೈಯುವುದಾಗಿಯೂ ಬೆದರಿಕೆ ಹಾಕಿದ್ದ.
ಕರೆಯನ್ನು ಗಂಭೀರವಾಗಿ ಪರಿಗಣಿಸದ ಭಟ್‌ಗೆ ಮೆಸೇಜ್ ಕಳುಹಿಸಿದ್ದ ಆರೋಪಿ ಲಕ್ನೋದಲ್ಲಿರುವ ತನ್ನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವಂತೆ ಹೇಳಿದ್ದ. ಇದೇ ಜಾಡನ್ನು ಹಿಡಿದುಕೊಂಡು ಲಕ್ನೋಗೆ ತೆರಳಿದ ಮುಂಬೈ ಪೊಲೀಸರು ಉತ್ತರ ಪ್ರದೇಶದ ವಿಶೇಷ ಕಾರ್ಯ ಪಡೆಯ ನೆರವಿನಿಂದ ಆರೋಪಿಯನ್ನು ಪತ್ತೆ ಹಚ್ಚಲು ಸಫಲರಾಗಿದ್ದಾರೆ. ಶುಕ್ರವಾರ ಮುಂಬೈಗೆ ಸಾಹುರನ್ನು ಕರೆ ತಂದಿರುವ ಪೊಲೀಸರು ರಿಮ್ಯಾಂಡ್ ಹೋಮ್‌ಗೆ ಕಳುಹಿಸಿಕೊಟ್ಟಿದ್ದಾರೆ.
ಸಾಹು ಶೂ ಅಂಗಡಿ ಇಡಲು ಸಂಬಂಧಿಕರಿಂದ 6 ಲಕ್ಷ ರೂ. ಸಾಲ ಪಡೆದಿದ್ದ. ಶೂ ಅಂಗಡಿಯಲ್ಲಿ ನಷ್ಟ ಅನುಭವಿಸಿದ್ದ ಈತ ನಟನಾಗುವ ಆಸೆಯಿಂದ 2016ರಲ್ಲಿ ಮುಂಬೈಗೆ ತೆರಳಿದ್ದ. ಆತನ ಕನಸು ಈಡೇರಲಿಲ್ಲ. 3 ತಿಂಗಳ ಹಿಂದೆ ಲಕ್ನೋಗೆ ವಾಪಸಾದ ಬಳಿಕ ಸಂಬಂಧಿಕರು 6 ಲಕ್ಷ ರೂ. ಸಾಲ ವಾಪಾಸು ನೀಡುವಂತೆ ಸಂಬಂಧಿಕರು ಕಿರುಕುಳ ನೀಡಲಾರಂಭಿಸಿದರು. ಭಟ್ ಫೋನ್‌ನಂಬರ್‌ನ್ನು ಹೊಂದಿದ್ದ ಸಾಹು , ದಾವೂದ್ ಸಹಚರ, ಈಗ ಜೈಲಿನಲ್ಲಿರುವ ಶ್ರೀವಾಸ್ತವನ ಹೆಸರು ಹೇಳಿಕೊಂಡು ಭಟ್‌ಗೆ ಬೆದರಿಕೆ ಕರೆ ಮಾಡಿದ್ದ.
ಭಟ್ ಫೆ.26 ರಂದು ಮೊದಲ ಕರೆ ಸ್ವೀಕರಿಸಿದ್ದರು. ಆಗ ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಆರೋಪಿ ಟೆಸ್ಟ್ ಹಾಗೂ ವಾಟ್ಸ್‌ಆ್ಯಪ್‌ಗಳಲ್ಲಿ ಸಂದೇಶ ಕಳುಹಿಸಿ ನನ್ನ ಕರೆಯನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಕೆ ನೀಡಿದ್ದ. ಭಟ್ ಕುಟುಂಬ ಸದಸ್ಯರನ್ನು ಕೊಲ್ಲುವ ಬೆದರಿಕೆ ಹಾಕಿದ್ದ. ಆ ನಂತರ ಭಟ್ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.