ಎರಡೂ ಕಾಲುಗಳನ್ನು ಕಳೆದುಕೊಂಡರೂ ವೈದ್ಯೆಯಾಗುವ ಛಲ ಬಿಡಲಿಲ್ಲ
ಡಾ. ರೋಷನ್ ಜವಾದ್ ಅನನ್ಯ ಸಾಧನೆ

ಮುಂಬೈ, ಮಾ.3: ಒಂಬತ್ತು ವರ್ಷಗಳ ಹಿಂದೆ ಮುಂಬೈಯಲ್ಲಿ ನಡೆದ ರೈಲು ಅಪಘಾತವೊಂದರಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿದ್ದರೂ, ವೈದ್ಯೆಯಾಗುವ ತನ್ನ ಕನಸನ್ನು ಛಲ ಬಿಡದೆ ಈಡೇರಿಸಿಕೊಂಡ ಜೋಗೇಶ್ವರಿ ನಿವಾಸಿ 24 ವರ್ಷದ ರೋಷನ್ ಜವಾದ್ ಇದೀಗ ತಮ್ಮ ಹೆಸರಿನ ಮುಂದೆ ಕೊನೆಗೂ ಡಾಕ್ಟರ್ ಎಂದು ಬರೆಸಿಕೊಳ್ಳುವ ಯೋಗ ಪಡೆದುಕೊಂಡಿದ್ದಾರೆ.
ನಿಯಮಗಳ ಪ್ರಕಾರ ಶೇ.70 ರಷ್ಟು ಅಂಗವೈಕಲ್ಯ ಹೊಂದಿರುವವರು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಾಧ್ಯವಿಲ್ಲವಾದರೂ ಶೇ.88ರಷ್ಟು ಅಂಗವೈಕಲ್ಯ ಹೊಂದಿರುವ ರೋಷನ್ ಮುಂಬೈ ಕೋರ್ಟಿನ ಮೊರೆ ಹೋಗಿ ವೈದ್ಯಕೀಯ ಶಿಕ್ಷಣ ಪಡೆದು ಈಗ ವೈದ್ಯೆಯಾಗಿದ್ದಾರೆ.
ಮಂಗಳವಾರ ನಡೆದ ಸಮಾರಂಭವೊಂದರಲ್ಲಿ ಆಕೆ ತನ್ನ ವೈದ್ಯಕೀಯ ಪದವಿ ಪಡೆದಾಗ ಆಕೆಯ ತಂದೆ ತರಕಾರಿ ಮಾರಾಟಗಾರ ಜವಾದ್ ಶೇಖ್ ಮತ್ತು ಗೃಹಿಣಿಯಾಗಿರುವ ತಾಯಿ ಅನ್ಸಾರಿ ಖಟೂನ್ ಅವರಿಗೆ ಆನಂದಬಾಷ್ಪ ತಡೆಯಲಾಗಲಿಲ್ಲ.
ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ರೋಷನ್ ತನ್ನ ಹತ್ತನೆ ತರಗತಿ ಪರೀಕ್ಷೆಯಲ್ಲಿ 2008ರಲ್ಲಿ ಶೇ 92.15 ಅಂಕಗಳನ್ನು ಪಡೆದಿದ್ದಳು. ಇದಾಗಿ ಕೆಲವೇ ತಿಂಗಳುಗಳಲ್ಲಿ ಅಕ್ಟೋಬರ್ 16,2008ರಂದು ಅಂಧೇರಿ ರೈಲ್ವೇ ನಿಲ್ದಾಣದಲ್ಲಿ ತುಂಬಿ ತುಳುಕುತ್ತಿದ್ದ ಲೋಕಲ್ ರೈಲಿನಿಂದ ಹೊರದೂಡಲ್ಪಟ್ಟ ಆಕೆ ಹಳಿಗೆ ಬಿದ್ದು ಆಕೆಯ ಕಾಲಿನ ಮೇಲೆ ರೈಲು ಹರಿದು ಹೋಗಿ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಳು. ಮುಂದೆ ಒಂದು ವರ್ಷದ ಕಾಲ ಆಕೆ ಪಡಬಾರದ ಪಾಡು ಪಟ್ಟಿದ್ದಳು. ಆಘಾತದಿಂದ ಚೇತರಿಸಿಕೊಂಡು ಮತ್ತೆ ಶಿಕ್ಷಣ ಪಡೆಯಲು ಒಂದು ವರ್ಷ ಬೇಕಾಯಿತು.
ತನ್ನ ಅಂತಿಮ ಎಂಬಿಬಿಎಸ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಆಕೆ ಮುಂದೆ ಎಂಡಿ ಶಿಕ್ಷಣ ಪೂರೈಸಿ ತನ್ನ ಹುಟ್ಟೂರಾದ ಆಝಂಘರ್ ನಲ್ಲಿ ಆಸ್ಪತ್ರೆಯೊಂದನ್ನು ತೆರೆಯುವ ಯೋಚನೆ ಹೊಂದಿದ್ದಾಳೆ.