ಬೇನಾಮಿ ವಹಿವಾಟುದಾರರಿಗೆ ಇನ್ನಷ್ಟು ಬಿಗಿಯಾದ ಕಾನೂನಿನ ಕುಣಿಕೆ

ಹೊಸದಿಲ್ಲಿ,ಮಾ.3: ಬೇನಾಮಿ ವಹಿವಾಟುಗಳನ್ನು ನಡೆಸುವವರು ಏಳು ವರ್ಷಗಳ ವರೆಗೆ ಕಠಿಣ ಜೈಲುಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಮತ್ತು ಆದಾಯ ತೆರಿಗೆ ಕಾಯ್ದೆಯಡಿಯೂ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ತೆರಿಗೆ ಇಲಾಖೆಯು ಶುಕ್ರವಾರ ಎಚ್ಚರಿಕೆಯನ್ನು ನೀಡಿದೆ.
ಈ ಸಂಬಂಧ ಪ್ರಮುಖ ರಾಷ್ಟ್ರೀಯ ದೈನಿಕಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿರುವ ಆದಾಯ ತೆರಿಗೆ ಇಲಾಖೆಯು, 1988ರ ಬೇನಾಮಿ ಆಸ್ತಿ ವಹಿವಾಟುಗಳ ಕಾಯ್ದೆಯು 2016,ನ.1ರಿಂದ ‘ಸಕ್ರಿಯ ’ಗೊಂಡಿರುವುದರಿಂದ ಬೇನಾಮಿ ವಹಿವಾಟುಗಳಲ್ಲಿ ಭಾಗಿಯಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದೆ.
ಕಪ್ಪುಹಣವು ಮಾನವತೆಯ ವಿರುದ್ಧದ ಅಪರಾಧವಾಗಿದೆ. ಅದನ್ನು ನಿರ್ಮೂಲಿಸಲು ಸರಕಾರಕ್ಕೆ ನೆರವಾಗುವಂತೆ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯನ್ನು ನಾವು ಆಗ್ರಹಿಸುತ್ತಿದ್ದೇವೆ ಎಂದಿರುವ ಇಲಾಖೆಯು ನೂತನ ಕಾಯ್ದೆಯ ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ. ತಮ್ಮ ಹೆಸರಿನಲ್ಲಿ ಬೇನಾಮಿ ಆಸ್ತಿ ಹೊಂದಿದವರು,ಇದಕ್ಕಾಗಿ ಹೂಡಿಕೆ ಮಾಡಿದವರು ಮತ್ತು ಬೇನಾಮಿ ವಹಿವಾಟುಗಳಿಗ ಕುಮ್ಮಕ್ಕು ನೀಡಿದವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಮತ್ತು ಏಳು ವರ್ಷಗಳವರೆಗೆ ಕಠಿಣ ಶಿಕ್ಷೆಗೊಳಗಾಗಬಹುದು, ಜೊತೆಗೆ ತಮ್ಮ ಬೇನಾಮಿ ಆಸ್ತಿಯ ಮಾರುಕಟ್ಟೆ ವೌಲ್ಯದ ಶೇ.25ರವರೆಗೆ ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ ಎಂದು ಅದು ತಿಳಿಸಿದೆ.
ಬೇನಾಮಿ ಆಸ್ತಿ ಕಾಯ್ದೆಯಡಿ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡುವವರು ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಬೇನಾಮಿ ಆಸ್ತಿ ವೌಲ್ಯದ ಶೇ. 10ರವರೆಗಿನ ಮೊತ್ತವನ್ನು ದಂಡವಾಗಿ ನೀಡಬೇಕಾಗುತ್ತದೆ ಎಂದಿರುವ ಇಲಾಖೆಯು, ಬೇನಾಮಿ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು ಮತ್ತು ಸರಕಾರವು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.
ಕಾಯ್ದೆಯು ಕಳೆದ ವರ್ಷ ಜಾರಿಗೊಂಡ ನಂತರ ಆದಾಯ ತೆರಿಗೆ ಇಲಾಖೆಯು ದೇಶಾದ್ಯಂತ 230ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಮತ್ತು 55 ಕೋ.ರೂ.ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದೆ. 200 ಕೋ.ರೂ.ಮೌಲ್ಯದ ಬೇನಾಮಿ ಆಸ್ತಿಗಳಿಗೆ ಸಂಬಂಧಿಸಿದ 140 ಪ್ರಕರಣಗಳಲ್ಲಿ ಜಪ್ತಿ ನೋಟಿಸುಗಳನ್ನು ಜಾರಿಗೊಳಿಸಲಾಗಿದೆ.