ದಲಿತ ದೌರ್ಜನ್ಯದಲ್ಲಿ 16 ವರ್ಷಗಳ ಹಿಂದಿನ ದಾಖಲೆ ಮುರಿದ ಗುಜರಾತ್!

ಅಹ್ಮದಾಬಾದ್,ಮಾ.3: ಗುಜರಾತ್‌ನ ದಲಿತರಿಗೆ 2016ನೆ ಇಸವಿ ಬಹಳ ಹಿಂಸಾತ್ಮಕವಾಗಿತ್ತು ಎಂದು ವೆಬ್‌ಪೋರ್ಟಲೊಂದು ವರದಿಮಾಡಿದೆ. 2016ರಲ್ಲಿ ಗುಜರಾತ್‌ನಲ್ಲಿ ನಡೆದ ದಲಿತರ ವಿರುದ್ಧ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆಗಳಂತಹ ಘಟನೆ ಕಳೆದ 16 ವರ್ಷಗಳ ದಾಖಲೆಯನ್ನು ಮುರಿದಿದೆ.
ಕಳೆದವರ್ಷ ಜುಲೈಯಲ್ಲಿ ಗುಜರಾತ್‌ನ ಉನಾದಲ್ಲಿ ಗೋಹತ್ಯೆ ಆರೋಪದಲ್ಲಿ ಗೋರಕ್ಷಕರು ದಲಿತರ ಬಟ್ಟೆ ಬಿಚ್ಚಿ ನಿರ್ದಯವಾಗಿ ಥಳಿಸಿದ್ದರು. ಈ ಘಟನೆ ನಂತರ ಗುಜರಾತ್‌ನಲ್ಲಿ ದಲಿತರೊಂದಿಗೆ ಕೆಟ್ಟವರ್ತನೆ ಮತ್ತು ಹೊಡೆದಾಟದ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಗುಜರಾತ್ ಸರಕಾರ ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಂಡಿರಲಿಲ್ಲ. ಅಂದಿನ ಆನಂದಿಬೆನ್ ಪಟೇಲ್ ಸರಕಾರದ ವಿರುದ್ಧ ತೀವ್ರ ಟೀಕೆ ಕೇಳಿ ಬಂದಿತ್ತು.
ಒಂದು ಆರ್‌ಟಿಐ ಅರ್ಜಿಯ ಮೂಲಕ ಪಡೆದ ಮಾಹಿತಿಯಂತೆ ಗುಜರಾತ್‌ನಲ್ಲಿ ಕಳೆದ ವರ್ಷ ದಲಿತರ ವಿರುದ್ಧ ಒಟ್ಟು 1,355 ಪ್ರಕರಣ ದಾಖಲಾಗಿದೆ. ಇದು ದಲಿತರೊಂದಿಗೆ ಹೊಡೆದಾಟ, ಹತ್ಯೆ, ದಲಿತ ಮಹಿಳೆಯರ ಅತ್ಯಾಚಾರಕ್ಕೆ ಸಂಬಂಧಿಸಿದ ಲೆಕ್ಕವಲ್ಲ. ಆರ್‌ಟಿಐ ಹೋರಾಟಗಾರ್ತಿ ಮುಂಜುಳಾ ಬೆನ್ ಬಾಬೂಭಾಯಿ ಗುಜರಾತ್ ಡಿಜಿಪಿಯವರಿಂದ ಸಂಪಾದಿಸಿದ ಲೆಕ್ಕ ಪ್ರಕಾರ 2016ರಲ್ಲಿ ಪ್ರತಿದಿನ ದಲಿತರ ವಿರುದ್ಧ ದೌರ್ಜನ್ಯ ನಡೆಸಿದ ನಾಲ್ಕು ಘಟನೆಗಳು ದಾಖಲಾಗಿವೆ. ಈ ಲೆಕ್ಕ ಗುಜರಾತ್‌ನ 33 ಜಿಲ್ಲೆಗಳ 40 ಪೊಲೀಸ್ ಕಚೇರಿಯಿಂದ ಪಡೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.