ಉ.ಪ್ರ: ನಾಳೆ ಆರನೇ ಹಂತದ ಮತದಾನ

ಲಕ್ನೊ, ಮಾ.3: ಸಮಾಜವಾದಿ ಪಕ್ಷದ ಪೋಷಕ ಮುಲಾಯಂ ಸಿಂಗ್ ಯಾದವ್ ಪ್ರತಿನಿಧಿಸುತ್ತಿರುವ ಅಝಂಗಢ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕ್ಷೇತ್ರಗಳೂ ಸೇರಿದಂತೆ ಉತ್ತರಪ್ರದೇಶದ ಒಟ್ಟು 49 ವಿಧಾನಸಭಾ ಕ್ಷೇತ್ರಗಳಿಗೆ ಮಾ.4ರಂದು ಬಿಗು ಭದ್ರತೆಯ ಮಧ್ಯೆ ಚುನಾವಣೆ ನಡೆಯಲಿದೆ.
ಅಝಂಗಢ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 10 ವಿಧಾನಸಭಾ ಕ್ಷೇತ್ರಗಳಿದ್ದು 2012ರಲ್ಲಿ 9 ಸ್ಥಾನಗಳನ್ನು ಪಡೆಯುವಲ್ಲಿ ಸಮಾಜವಾದಿ ಪಕ್ಷ ಯಶಸ್ವಿಯಾಗಿತ್ತು. ಆದರೆ ಈ ಬಾರಿ ಮುಲಾಯಂ ಸಿಂಗ್ ಅಝಂಗಢ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಒಂದೂ ಕ್ಷೇತ್ರಗಳಲ್ಲಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿಲ್ಲ.
49 ಸ್ಥಾನಗಳಲ್ಲಿ ಬಿಜೆಪಿ 45 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೆ ಇದರ ಮಿತ್ರಪಕ್ಷಗಳಾದ ಅಪ್ನ ದಳ 1 ಸ್ಥಾನದಲ್ಲಿ, ಸುಹೆಲ್‌ದೇವ್ ಭಾರತೀಯ ಸಮಾಜ ಪಾರ್ಟಿ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಎಸ್ಪಿ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಅದರ ಮಿತ್ರ ಪಕ್ಷ ಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಬಿಎಸ್ಪಿ ಎಲ್ಲಾ 49 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಮಾವು, ಗೋರಖ್‌ಪುರ, ಮಹಾರಾಜ್‌ಗಂಜ್, ಕುಶಿನಗರ, ಡಿಯೊರಿಯಾ, ಅಝಮ್‌ಗಢ ಮತ್ತು ಬಲಿಯಾ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿದೆ. 94.60 ಲಕ್ಷ ಪುರುಷರು ಮತ್ತು 77.84 ಲಕ್ಷ ಮಹಿಳೆಯರು ಸೇರಿದಂತೆ ಸುಮಾರು 1.72 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು ಕಣದಲ್ಲಿರುವ 635 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.