ವಿಶ್ವದ ಸಿಂಹಗಳ ಶೇ.70ರಷ್ಟು ಭಾರತದಲ್ಲಿ : ಅನಿಲ್ ದವೆ

ಹೊಸದಿಲ್ಲಿ, ಮಾ.3: ಭಾರತದಲ್ಲಿ ಈಗ 2,400 ಸಿಂಹಗಳಿದ್ದು ಇದು ವಿಶ್ವದ ಸಿಂಹ ಸಂತಾನದ ಶೇ.70ರಷ್ಟು ಆಗಿದೆ ಎಂದು ಪರಿಸರ ಸಚಿವ ಅನಿಲ್ ದವೆ ತಿಳಿಸಿದ್ದಾರೆ. ಸಿಂಹಗಳ ಸಂರಕ್ಷಣೆ ಕುರಿತು ಕೈಗೊಂಡ ಕ್ರಮದಿಂದ ವಿಶ್ವದಲ್ಲೇ ಅತೀ ಹೆಚ್ಚು ಸಿಂಹಗಳು ಭಾರತದಲ್ಲಿ ಇವೆ ಎಂದವರು ಹೇಳಿದ್ದಾರೆ.
ದಿಲ್ಲಿ ಮೃಗಾಲಯದಲ್ಲಿ ‘ವೈಲ್ಡ್‌ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋ(ಡಬ್ಲುಸಿಸಿಬಿ)’ ಆಶ್ರಯದಲ್ಲಿ ನಡೆದ ವಿಶ್ವ ವನ್ಯಜೀವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವನ್ಯಜೀವಿ ಸಂರಕ್ಷಣೆಯ ವಿಷಯದಲ್ಲಿ ನಾವು ಇತರರಿಗೆ ಮಾರ್ಗದರ್ಶಕರಾಗಿದ್ದೇವೆ. ಜನತೆಯ ಸಹಕಾರದಿಂದ ಅಳಿವಿನಂಚಿನಲ್ಲಿರುವ ಹಲವು ವನ್ಯಜೀವಿಗಳ ರಕ್ಷಣೆ ಸಾಧ್ಯವಾಗಿದೆ. ಇದೇ ರೀತಿ ಹುಲಿ ಮತ್ತಿತರ ವನ್ಯಜೀವಿಗಳ ಸಂತತಿ ಅಭಿವೃದ್ಧಿಯಲ್ಲೂ ಭಾರತ ಗಣನೀಯ ಯಶಸ್ಸು ಸಾಧಿಸಿದೆ. ಇತರರಿಗೆ ಅನುಕರಣೀಯ ಕಾರ್ಯ ನಿರ್ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಮೆರಿಕ ರಾಯಭಾರಿ ಕಚೇರಿಯ ಅಧಿಕಾರಿ ಮೇರಿಕೇ ಎಲ್.ಕಾರ್ಲ್‌ಸನ್ ಮಾತನಾಡಿ, ಭೂಮಿಯ ಸಂರಕ್ಷಣೆಯಲ್ಲಿ ಸ್ಥಳೀಯ ಸಮಾಜ ಪ್ರಮುಖ ಪಾತ್ರ ವಹಿಸಬೇಕು . ಸಂರಕ್ಷಣಾ ಕಾರ್ಯ ವೈಯಕ್ತಿಕ ಮಟ್ಟದಲ್ಲಿ ಆರಂಭವಾಗಿ, ಕುಟುಂಬ, ಗ್ರಾಮ ಮಟ್ಟಕ್ಕೆ ವಿಸ್ತರಿಸಬೇಕು ಎಂದರು.ಡಬ್ಲುಸಿಸಿಬಿ ಮುಖ್ಯಸ್ಥೆ ತಿಲೋತ್ತಮ ವರ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ಘೋಷಣೆ ಬರೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಕಳ್ಳ ಬೇಟೆಗಾರರಿಂದ ವಶಪಡಿಸಿಕೊಂಡ ಅಕ್ರಮ ಪ್ರಾಣಿ ಉತ್ಪನ್ನಗಳನ್ನು ಸುಡಲಾಯಿತು.