ಉರ್ದು ಭಾಷೆಯಲ್ಲಿ ‘ನೀಟ್’ ಬರೆಯಲು ಅವಕಾಶ ಕೇಂದ್ರ ಸರಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್

ಹೊಸದಿಲ್ಲಿ, ಮಾ.3: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಉರ್ದು ಭಾಷೆಯಲ್ಲಿ ಬರೆಯಲು ಅವಕಾಶ ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಮತ್ತು ಕೇಂದ್ರ ಸರಕಾರಕ್ಕೆ ತಿಳಿಸಿದೆ.
ಇದೇ ವೇಳೆ, ಸಂಬಂಧಿತ ರಾಜ್ಯಗಳು ಕೋರಿಕೆ ಸಲ್ಲಿಸಿದರೆ ಯಾವುದೇ ಭಾಷೆಯಲ್ಲೂ ‘ನೀಟ್’ ಪರೀಕ್ಷೆ ಬರೆಯಲು ಅವಕಾಶ ನೀಡುವ ವಿಷಯದಲ್ಲಿ ತಾನು ಮುಕ್ತ ಅಭಿಪ್ರಾಯ ಹೊಂದಿರುವುದಾಗಿ ಎಂಸಿಐ ಸಲ್ಲಿಸಿದ್ದ ನಿವೇದನೆಯನ್ನು ಗಮನಿಸಿರುವುದಾಗಿ ಇದೇ ವೇಳೆ ಸುಪ್ರೀಂಕೋರ್ಟ್ ತಿಳಿಸಿದೆ.
ಉರ್ದು ಭಾಷೆಯಲ್ಲಿ ‘ನೀಟ್’ ಪರೀಕ್ಷೆ ಬರೆಯಲು ಅವಕಾಶ ಕೋರಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ (ಎಸ್‌ಐಒ) ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಮತ್ತು ಆರ್. ಬಾನುಮತಿ ಅವರನ್ನೊಳಗೊಂಡ ಪೀಠವೊಂದು ಈ ಕುರಿತು ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ, ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ(ಡಿಸಿಐ) ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ)ಗೆ ಕೂಡಾ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 10ಕ್ಕೆ ನಿಗದಿಗೊಳಿಸಿತು.
ಉರ್ದು ಭಾಷೆಯಲ್ಲೂ ‘ನೀಟ್’ ಪರೀಕ್ಷೆ ಬರೆಯಲು ಅವಕಾಶ ಕೋರಿ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳು ಈಗಾಗಲೇ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ ಮನವಿ ಮಾಡಿರುವುದಾಗಿ ಎಸ್‌ಐಒ ಪರ ವಕೀಲರು ನ್ಯಾಯಾಲಯದ ಗಮನ ಸೆಳೆದರು.
ಈ ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕೆಂಬ ಎಸ್‌ಐಒ ಪರ ವಕೀಲರ ಮನವಿಯನ್ನು ಇದಕ್ಕೂ ಮುನ್ನ ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. ಉರ್ದು ಭಾಷೆಯಲ್ಲಿ ‘ನೀಟ್’ ಬರೆಯಲು ಅವಕಾಶ ನೀಡದಿರುವುದು ಏಕಪಕ್ಷೀಯ ನಿರ್ಧಾರವಾಗಿದ್ದು ಸಂವಿಧಾನದ 14 ಮತ್ತು 21ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ ಎಂದು ಎಸ್‌ಐಒ ವಕೀಲರು ವಾದಿಸಿದ್ದರು.
ಉರ್ದು ಸೇರ್ಪಡೆಯ ಜೊತೆಗೆ, ಪರೀಕ್ಷೆ ಬರೆಯುವ ಅವಕಾಶ(ಪ್ರಯತ್ನ) ಹೆಚ್ಚಳ, ವಯಸ್ಸಿನ ನಿರ್ಬಂಧ ಸಡಿಲಿಕೆ ಕುರಿತು ಹಲವು ಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಹಿಂದಿ , ಇಂಗ್ಲಿಷ್, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ತಮಿಳು, ತೆಲುಗು, ಒರಿಯಾ ಮತ್ತು ಕನ್ನಡ- ಈ 10 ಭಾಷೆಗಳಲ್ಲಿ ‘ನೀಟ್’ ಪರೀಕ್ಷೆ ಬರೆಯಲು ಅಧಿಕೃತ ಮಾನ್ಯತೆ ನೀಡಲಾಗಿದೆ.